ಬೆಳಗಾವಿ : ಚೀನಾ ಉತ್ಪನ್ನಗಳ ಮಾರಾಟ ಮತ್ತು ಖರೀದಿ ನಿಲ್ಲಿಸುವಂತೆ ಆಗ್ರಹಿಸಿ ನಗರದ ಬೆಂಡಿ ಬಜಾರ್‌ನಲ್ಲಿ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಪದಾಧಿಕಾರಿಗಳು ಚೀನಾ ವಸ್ತುಗಳಿಗೆ ಬೆಂಕಿ ಹಚ್ಚಿ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು. ಗಡಿಯಲ್ಲಿ ಚೀನಾದೊಂದಿಗೆ ನಡೆದ ಸಂಘರ್ಷದಲ್ಲಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.
ದೇಶದ ಎಲ್ಲೆಡೆ ಆಕ್ರೋಶ ಸ್ಫೋಟಗೊಂಡಿದೆ. ಹೀಗಾಗಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂದು ಚೀನಾ ವಸ್ತುಗಳಿಗೆ ಬೆಂಕಿ ಹಚ್ಚುವ ಮೂಲಕ ಕಾರ್ಯಕರ್ತರು ಜಾಗೃತಿ ಮೂಡಿಸಿದರು. ಬಳಿಕ ಮಾರುಕಟ್ಟೆ ಪ್ರದೇಶದಲ್ಲಿ ಸಂಚರಿಸಿ, ಚೀನಾ ವಸ್ತುಗಳನ್ನು ಮಾರಾಟ ಮಾಡಬಾರದು, ಖರೀದಿ ಮಾಡಬಾರದು ಎಂದು ತಿಳಿಸಿದರು.
ಬಿಜೆಪಿ ಒಬಿಸಿ ಮೋರ್ಚಾ ಮುಖಂಡ ವಿಜಯ ಕದಂ ಮಾತನಾಡಿ, ದೇಶಕ್ಕಾಗಿ ಪ್ರಾಣ ತೆತ್ತ ನಮ್ಮ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸುವುದಕ್ಕೆ ಎಲ್ಲರೂ ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕು. ಇದೊಂದು ಆಂದೋಲನವಾಗಬೇಕು ಎಂದರು. ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಶ್ರೀಕಾಂತ ಪಾಟೀಲ, ಹಲವು ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.