ಸಿಂಧನೂರು: ತಾಲೂಕಿನ ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯಲ್ಲಿ ಈಗಾಗಲೇ ಭತ್ತ ನಾಟಿಗೆ ಸಿದ್ಧತೆ ಜೋರಾಗಿದೆ. ಇನ್ನೆರಡು ದಿನಗಳಲ್ಲಿ ಕಾಲುವೆಗೆ ನೀರು ಬಿಡುಗಡೆ ಮಾಡಲಾಗುತ್ತದೆ ಎಂಬ ಲೆಕ್ಕಚಾರದಲ್ಲಿ ರೈತರಿದ್ದಾರೆ.
ಕಳೆದ ಜೂನ್‌ನಲ್ಲಿ ಆರಂಭದಲ್ಲಿ ಮುಂಗಾರು ಮಳೆ ಕೈ ಕೊಟ್ಟಿತ್ತು. ಇದರಿಂದ ರೈತರಿಗೆ ತಲೆನೋವಾಗಿ ಪರಿಣಮಿಸಿತ್ತು. ಅತ್ತ ಮಳೆ ಇಲ್ಲ, ಇತ್ತ ತುಂಗಭದ್ರಾ ಜಲಾಶಯದಲ್ಲಿ ನೀರೂ ಇಲ್ಲ ಎನ್ನುವ ಸ್ಥಿತಿ ಎದುರಾಗಿತ್ತು. ಜುಲೈನಲ್ಲಿ ಸುರಿದ ಮಳೆಯಿಂದ ಭೂಮಿ ಹದ ಮಾಡುವ ಕಾರ್ಯ ಜೋರಾಗಿದೆ.
ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿದಿದ್ದರಿಂದ ತುಂಗಭದ್ರಾ ಜಲಾಶಯಕ್ಕೆ 40 ರಿಂದ 1 ಲಕ್ಷ ಕ್ಯೂಸೆಕ್ ನೀರು ಹರಿದು ಬಂತು. ಹೀಗಾಗಿ ಡ್ಯಾಂನಲ್ಲಿ 80 ಟಿಎಂಸಿ ನೀರು ಸಂಗ್ರಹಗೊಂಡಿದ್ದು, ರೈತಾಪಿ ವರ್ಗಕ್ಕೆ ಖುಷಿ ನೀಡಿದೆ. ರೈತರು ಹುಮ್ಮಸ್ಸಿನಿಂದ ಭತ್ತ ನಾಟಿಗೆ ಹೊಲಗಳನ್ನು ಸಜ್ಜುಗೊಳಿಸಲು ಮುಂದಾಗಿದ್ದಾರೆ. ಕೆರೆ, ಹಳ್ಳ, ಬೋರ್ ವೆಲ್‌ಗಳನ್ನು ಅವಲಂಬಿಸಿದ ರೈತರು ಭತ್ತ ನಾಟಿಯಲ್ಲಿ ತೊಡಗಿಕೊಂಡಿದ್ದಾರೆ.
ಇದನ್ನೂ ಓದಿ: ತುಂಗಭದ್ರಾ ಎಡದಂಡೆ ನಾಲೆಗೆ ನೀರು ಬಿಡುಗಡೆ
ಇನ್ನು ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯ 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡುವ ಗುರಿ ಹೊಂದಲಾಗಿದೆ. ಆದರೆ ಈ ಮುಂಚೆ ಜುಲೈನಲ್ಲಿ ಭತ್ತ ನಾಟಿ ಅರ್ಧದಷ್ಟು ಪೂರ್ಣಗೊಂಡು, ನಾಲೆ ವ್ಯಾಪ್ತಿಯ ಕೆಳ ಭಾಗದಲ್ಲಿ ಮಾತ್ರ ಭತ್ತ ನಾಟಿ ಬಾಕಿ ಇರುತ್ತಿತ್ತು. ಈ ಬಾರಿ ಮಾತ್ರ ಮಳೆ ಅಭಾವ, ಜಲಾಶಯದಲ್ಲಿ ನೀರಿನ ಕೊರತೆಯಿಂದ ಬರೋಬ್ಬರಿ ತಿಂಗಳ ನಂತರ ಭತ್ತ ನಾಟಿ ಆಗುತ್ತಿದೆ. ಮುಂಗಾರು ಬೆಳೆ ಬೆಳೆದುಕೊಳ್ಳಲು ಯಾವುದೇ ಸಮಸ್ಯೆ ಇಲ್ಲ ಎಂಬುದು ರೈತರ ಅಭಿಪ್ರಾಯವಾಗಿದೆ.
ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯ ತಾಲೂಕಿನಾದ್ಯಂತ ಏಕಕಾಲಕ್ಕೆ ಭತ್ತ ನಾಟಿ ಆರಂಭಗೊಂಡಿದೆ. ನೀರಿನ ಅಭಾವದಿಂದ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಸಿ ಬೆಳೆದಿಲ್ಲ. ಪಕ್ಕದ ತಾಲೂಕು, ತುಂಗಭದ್ರಾ ನದಿ ವ್ಯಾಪ್ತಿಯಲ್ಲಿಯೂ ಸಸಿ ಹಾಕಿದ್ದರೂ, ಬೆಳವಣಿಗೆ ಆಗಿಲ್ಲ. ಬೇರೆ ತಾಲೂಕು, ಜಿಲ್ಲೆಗಳಿಂದ ಸಸಿಗಳನ್ನು ತಂದುಕೊಳ್ಳಲು ತಯಾರಿ ನಡೆಸಲಾಗಿದೆ. ಇದರಿಂದ ವೆಚ್ಚ ಕೂಡ ಹೆಚ್ಚಾಗಿದೆ.
ಸಿಂಧನೂರು ತಾಲೂಕಿನಲ್ಲಿ ಜುಲೈನಲ್ಲಿ ಭತ್ತ ನಾಟಿಯಾಗಬೇಕಿತ್ತು. ಮಳೆ ವಿಳಂಬದಿಂದ ತಡವಾಗಿದೆ. ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಿರುವುದರಿಂದ ಆದಷ್ಟು ಬೇಗ ನಾಲೆಗೆ ನೀರು ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಆಗಸ್ಟ್ ಮೂರನೇ ವಾರದೊಳಗೆ ಭತ್ತ ನಾಟಿ ಪೂರ್ಣಗೊಳ್ಳಲಿದೆ.
ನಜ್ಮೀರ್ ಅಹ್ಮದ್
ತಾಲೂಕು ಸಹಾಯಕ ಕೃಷಿ ನಿರ್ದೇಶಕ, ಸಿಂಧನೂರು
ಮುಂಗಾರು ಮಳೆ ವಿಳಂಬದಿಂದ ನಿರಾಸೆಯಾಗಿದೆ. ನಮ್ಮ ಭಾಗದಲ್ಲಿ ವರುಣನ ಕೃಪೆ ಅಷ್ಟಾಗಿ ಆಗದಿದ್ದರೂ, ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿರುವುದು ಹೊಸ ಆಶಾಭಾವನೆ ಮೂಡಿಸಿದೆ. ಈಗಾಗಲೇ ಭತ್ತ ನಾಟಿಗೆ ಹೊಲಗಳನ್ನು ಸಜ್ಜುಗೊಳಿಸಲಾಗುತ್ತಿದೆ.
ವಿಜಯಕುಮಾರ
ತಿಡಿಗೋಳ ರೈತ.