ಕಬ್ಬಿಗೆ ಬೆಂಬಲ ಬೆಲೆ ಘೋಷಿಸದೆ ಕಬ್ಬನ್ನುರಿಸುವ ಹಂಗಾಮವನ್ನು ಆರಂಭಿಸಬಾರದು ಎನ್ನುವುದು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘಗಳಿಂದ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು. ರಾಜು ಶೆಟ್ಟಿ, ಮಹಾಂತೇಶ ಕಾಮತ, ದಿನೇಶ್ ಇತರರಿದ್ದರು. 
ಜಿಲ್ಲೆ

ಕಬ್ಬಿಗೆ ಬೆಂಬಲ ಬೆಲೆ ಹೆಚ್ಚಳಕ್ಕೆ ಅಗ್ರಹ


ಬೆಳಗಾವಿ: ಕಬ್ಬಿಗೆ ಬೆಂಬಲ ಬೆಲೆ ಘೋಷಿಸದೆ ಕಬ್ಬನ್ನುರಿಸುವ ಹಂಗಾಮ ಆರಂಭಿಸಬಾರದು ಎನ್ನುವುದು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘಗಳಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ರೈತ ಮುಖಂಡರು ಬಾರುಕೋಲು ಸಪ್ಪಳ ಮಾಡುತ್ತ ಆಕ್ರೋಶ ವ್ಯಕ್ತಪಡಿಸಿದರು. ಮಹಾರಾಷ್ಟ್ರದಲ್ಲಿ ಪ್ರತಿಟನ್ ಕಬ್ಬಿಗೆ 3,700 ರೂ., ಗುಜರಾತ್‌ನಲ್ಲಿ 4,000 ರೂ.ಗೂ ಹೆಚ್ಚು ಬೆಲೆ ನೀಡಲಾಗುತ್ತಿದೆ. ಅದರಂತೆ ರಾಜ್ಯದಲ್ಲೂ ಪ್ರತಿಟನ್ ಕಬ್ಬಿಗೆ 4,000ಕ್ಕೂ ಹೆಚ್ಚು ರೂ. ಬೆಂಬಲ ಬೆಲೆ ನೀಡಬೇಕು. ನ.15ರಿಂದ ಕಬ್ಬು ನುರಿಸುವ ಹಂಗಾಮು ಆರಂಭಗೊಳ್ಳಲಿದೆ. ಸರ್ಕಾರ ಸಕ್ಕರೆ ಕಾರ್ಖಾನೆ ಸಂಚಾಲಕರ ಸಭೆ ನಡೆಸಿ, ಅವರಿಗೆ ಹೆಚ್ಚುವರಿ ಬೆಲೆ ನೀಡುವಂತೆ ಸೂಚಿಸಬೇಕು. ಅಲ್ಲದೇ ಬಾಕಿ ಬಿಲ್ ಅನ್ನು ಕೂಡಲೇ ನೀಡಬೇಕು ಎಂದು ಒತ್ತಾಯಿಸಿದರು. ಒನ್ ನೇಷನ್ ಒನ್ ಎಲೆಕ್ಷನ್ ಎನ್ನುವ ಪ್ರಧಾನಿ ಮೋದಿ ಅವರು, ದೇಶದ ಎಲ್ಲ ಸಕ್ಕರೆ ಕಾರ್ಖಾನೆಗಳೂ 4,440 ರೂ. ಪ್ರತಿಟನ್ ಕಬ್ಬಿಗೆ ಬೆಲೆ ನಿಗದಿಪಡಿಸಬೇಕು. ಪಡೆದ ಸಾಲಕ್ಕಿಂತ ಬಡ್ಡಿದರ ಹೆಚ್ಚಾಗಿದ್ದು, ರೈತರ ಮೇಲೆ ಅನ್ಯಾಯವಾಗುತ್ತಿದೆ. ಇದೇ ರೀತಿ ಮುಂದುವರೆದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸ್ವಾಭಿಮಾನಿ ರೈತ ಸಂಘದ ಅಧ್ಯಕ್ಷ, ಮಾಜಿ ಸಂಸದ ರಾಜು ಶೆಟ್ಟಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕೂಲಿ ಕಾರ್ಮಿಕ ಸಂಘದ ಅಧ್ಯಕ್ಷ ಮಹಾಂತೇಶ ಕಾಮತ ರೈತ ಸಂಘದ ರಾಜ್ಯಾಧ್ಯಕ್ಷ ದಿನೇಶ್ ಇತರರಿದ್ದರು.