ಬೆಳಗಾವಿ ಸುವರ್ಣ ವಿಧಾನಸೌಧ ಬಳಿಯ ಸುವರ್ಣ ಉದ್ಯಾನವನದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದಿಂದ ಪ್ರತಿಭಟನೆ ನಡೆಯಿತು. ಡಾ. ಶಿವಣ್ಣ ಎಸ್.ಕೆ., ಬಸಪ್ಪ ತಳವಾರ, ಎನ್.ಕಳಸನ್ನವರ, ಶಂಕರ ಹರ್ಜೆ ಇತರರಿದ್ದರು. 
ಜಿಲ್ಲೆ

ಅಧಿವೇಶನಕ್ಕೆ ಪ್ರತಿಭಟನೆ ಕಾವು

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನ ಹಿನ್ನೆಲೆಯಲ್ಲಿ ಗುರುವಾರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮಾಜಿ ಸೈನಿಕರ ಸಂಘ, ರೈತ ಸಂಘ, ಭೂ ಮಾಪಕರ ನೌಕರರ ಸಂಘ ಸೇರಿ 12 ಸಂಘಟನೆಗಳಿಂದ ಪ್ರತಿಭಟನೆ ನಡೆಸಿ, ಸರ್ಕಾರದ ಗಮನ ಸೆಳೆಯಲಾಯಿತು. ಸರ್ಕಾರದ ಪರ ಕಾರ್ಮಿಕ ಸಚಿವ ಸಂತೋಡ ಲಾಡ್ ಮನವಿ ಸ್ವೀಕರಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.

ಮಾಜಿ ಸೈನಿಕರಿಗೆ ಚುನಾವಣೆಯಲ್ಲಿ ಮೀಸಲಾತಿ ನೀಡಿ: ಮಾಜಿ ಸೈನಿಕರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರತ್ಯೇಕ ರಾಜಕೀಯ ಮೀಸಲಾತಿ ನೀಡುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ಜನರಿಗೆ, ದೇಶ ಕಾಯುವ ಸೈನಿಕರಿಗೆ ರಾಜಕೀಯ ಪ್ರಾಧಾನ್ಯತೆಯಿಲ್ಲ. ಆದ್ದರಿಂದ ದೇಶ ಸೇವೆ ಮಾಡಿ ನಿವೃತ್ತರಾದ ಸೈನಿಕರಿಗೆ ಜನ ಸೇವೆಗೆ ರಾಜಕೀಯ ಮೀಸಲಾತಿ ನೀಡಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಮಾಜಿ ಸೈನಿಕರ ಮಕ್ಕಳಿಗೆ ಮೀಸಲಾತಿ, ರಾಜ್ಯ ಸರ್ಕಾರಿ ನೌಕರಿಯಲ್ಲಿ 10% ಮೀಸಲಾತಿ, ಟೋಲ್‌ಗಳಲ್ಲಿ ಉಚಿತ ಪ್ರವೇಶ ನೀಡಬೇಕು, ಪ್ರತಿ ತಾಲೂಕು ಕೇಂದ್ರಗಳಲ್ಲಿ ಸೈನಿಕ ಭವನ ನಿರ್ಮಿಸಬೇಕು ಎಂದು ಮನವಿ ಮೂಲಕ ಆಗ್ರಹಿಸಿದರು.

ಡಾ. ಶಿವಣ್ಣ ಎಸ್.ಕೆ., ಬಸಪ್ಪ ತಳವಾರ, ಎನ್.ಕಳಸನ್ನವರ, ಶಂಕರ ಹರ್ಜೆ ಇತರರಿದ್ದರು.