ಕಾಗವಾಡ: ಆತ್ಮರಕ್ಷಣೆ ಮಾಡಿಕೊಳ್ಳಲು ಕರಾಟೆ ತರಬೇತಿ ಪಡೆದುಕೊಳ್ಳಬೇಕು. ಸ್ವಯಂ ರಕ್ಷಣೆಗೆ ಕರಾಟೆ ಅತ್ಯುತ್ತಮ ಅಸ್ತ್ರವಾಗಿದೆ ಎಂದು ಗದಗ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಶಾಂತಾರಾಮ ಜುಗುಳೆ ಹೇಳಿದರು.
ತಾಲೂಕಿನ ಶಿರಗುಪ್ಪಿ ಗ್ರಾಮದ ಹೊರವಲಯದ ಮಲ್ಲಿಕಾರ್ಜುನ ಕನ್ವೆನ್ಶನಲ್ ಹಾಲ್‌ನಲ್ಲಿ ರಾಣಿ ಚನ್ನಮ್ಮ ಸೆಲ್ಫ್ ಡಿಫೆನ್ಸ್ ಮತ್ತು ಕರಾಟೆ ಸ್ಪೋರ್ಟ್ಸ್ ಅಸೋಷಿಯೇಶನ್ ಬೆಳಗಾವಿ ಹಾಗೂ ಜಪಾನ ಯಮಾಬೂಕಿ ಶಿತೋರಿಯೊ ಕರಾಟೆಡು ಅಸೋಷಿಯೇಶನ್ ಆಫ್ ಇಂಡಿಯಾ ಸಹಯೋಗದಲ್ಲಿ 2 ದಿನಗಳ ಕಾಲ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಮುಕ್ತ ಕರಾಟೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಪಾಲಕರು ತಮ್ಮ ಮಕ್ಕಳಿಗೆ ಆತ್ಮರಕ್ಷಣೆಯ ತರಬೇತಿ ನೀಡಬೇಕು. ಎಲ್ಲ ಶಾಲಾ-ಕಾಲೇಜುಗಳಲ್ಲಿ ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿ ಕಡ್ಡಾಯಗೊಳಿಸಬೇಕು ಎಂದರು. ಕರಾಟೆ ರಾಷ್ಟ್ರೀಯ ಅಧ್ಯಕ್ಷ ಮೋಹನಕುಮಾರ ರಜಪೂತ ಮಾತನಾಡಿ, ಸತತ ಪರಿಶ್ರಮದಿಂದ ಸಾಧನೆ ಮಾಡಬೇಕು. ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದರು. ವಿವಿಧ ರೀತಿಯ ಸ್ವಯಂ ರಕ್ಷಣಾ ಕಲೆಗಳನ್ನು ಪ್ರದರ್ಶಿಸಲಾಯಿತು. ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಕರಾಟೆ ಪಟುಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ರಾಣಿ ಚನ್ನಮ್ಮ ಸೆಲ್ಫ್ ಡಿಫೆನ್ಸ್ ಮತ್ತು ಕರಾಟೆ ಸ್ಪೋರ್ಟ್ಸ್ ಅಸೋಷಿಯೇಶನ್‌ನ ರಾಜು ಪಾಟೀಲ, ಮೃತ್ಯುಂಜಯ ಹೂಗಾರ, ಲಕ್ಷ್ಮಣ ತೋರಣಗಟ್ಟಿ, ಶಿವಾನಂದ ಹಳಿಗೌಡ್ರು, ಮಹಾವೀರ ಜೀರಗಿಹಾಳ, ಮಾಯಪ್ಪ ಪೂಜಾರಿ, ಲಕ್ಷ್ಮಣ ಚೌಗುಲಾ, ತೇಜಪಾಲ ಉಪಾಧ್ಯೆ ಇತರರು ಇದ್ದರು.