ಜಿಲ್ಲೆ

ಮರಳುಗಾರಿಕೆಗೆ ಕಡಿವಾಣ ಹಾಕಿ

ಬೆಳಗಾವಿ: ನದಿಗಳ ಹಿನ್ನೀರಿನಲ್ಲಿ ಶೇಖರಣೆಗೊಂಡ ಮಣ್ಣು ತೊಳೆದು ಅದರ ಕಲ್ಲುಪುಡಿಗಳನ್ನೇ ಮರಳು ಎಂದು ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಎಂ.ಸ್ಯಾಂಡ್ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘ ಮನವಿ ಸಲ್ಲಿಸಿತು.

ನಗರದಲ್ಲಿ ಸೋಮವಾರ ಸಚಿವರನ್ನು ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಹಳ್ಳ-ಕೊಳ್ಳ, ಪಟ್ಟಾ ಜಮೀನಿನ ಮರಳುಗಾರಿಕೆಗೆ ಅವಕಾಶ ನೀಡಿದೆ. ಇದರಿಂದ ಎಂ.ಸ್ಯಾಂಡ್ ಉತ್ಪಾದನೆ ಹಾಗೂ ಮಾರಾಟ ಕಷ್ಟವಾಗಲಿದ್ದು, ಎಂ.ಸ್ಯಾಂಡ್ ಉತ್ಪಾದಕರಿಗೆ ನಷ್ಟವಾಗುತ್ತದೆ. ಹೀಗಾಗಿ ಈ ಕುರಿತು ಸರ್ಕಾರದ ಮಟ್ಟದಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸಬೇಕು ಎಂದು ಮನವಿ ಮೂಲಕ ಆಗ್ರಹಿಸಿದರು.

ಎಂ.ಸ್ಯಾಂಡ್ ಘಟಕದ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸುವುದರಿಂದ ಸಣ್ಣಪುಟ್ಟ ಕಾಮಗಾರಿಗಳಿಗೆ ಸ್ಯಾಂಡ್ ಮಾರಾಟಕ್ಕೆ ತೊಂದರೆಯಾಗಲಿದೆ. ಇದರಿಂದ ಜಿಲ್ಲೆಯಲ್ಲಿ ಸ್ಯಾಂಡ್ ಘಟಕಗಳು ತೊಂದರೆ ಅನುಭವಿಸಬೇಕಾಗುತ್ತವೆ. ಕೂಡಲೇ ಆದೇಶ ಹಿಂಪಡೆಯಬೇಕು. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ಸಂಘದ ಅಧ್ಯಕ್ಷ ಚಂದ್ರಶೇಖರ ಕೊಣ್ಣೂರ, ಉಪಾಧ್ಯಕ್ಷ ಸಂಜಯ ಕುಪ್ಪಸಗೌಡರ ಸೇರಿ ವಿವಿಧ ಪದಾಧಿಕಾರಿಗಳು ಇದ್ದರು.