ಕಡಬ: ಕಡಬ ತಾಲೂಕು ಕಾಡಂಚಿನ ಕೊಂಬಾರು ಗ್ರಾಮದ ಕೆಂಜಾಳ ಪರಿಸರದ ಜನತೆ ನ್ಯಾಯಬೆಲೆ ಅಂಗಡಿಯಲ್ಲಿ ದೊರಕುವ ಪಡಿತರಕ್ಕಾಗಿ ಗುಡ್ಡವನ್ನೆರುವ ಸ್ಥಿತಿ ನಿರ್ಮಾಣವಾಗಿದೆ. ನೆಟ್‌ವರ್ಕ್ ಸಮಸ್ಯೆಯ ಪರಿಣಾಮ ಈ ಭಾಗದ ಜನತೆ ಸಂಕಷ್ಟ ಅನುಭವಿಸುವಂತಾಗಿದೆ.
ಕೋವಿಡ್ ಮಾರ್ಗಸೂಚಿಯಂತೆ ಬೆಳಗ್ಗೆ 6ರಿಂದ 10ರವರೆಗೆ ದಿನಸಿ ವಸ್ತುಗಳ ಖರೀದಿಗೆ ಅವಕಾಶವಿದೆ. ಈ ಸಮಯದಲ್ಲಿ ಪಡಿತರ ವಿತರಣೆ ಮಾಡಬೇಕಾದ ಅನಿವಾರ್ಯತೆಯಿದ್ದಾಗ ನೆಟ್‌ವರ್ಕ್ ಸಮಸ್ಯೆ ಉಂಟಾದರೆ ಫಲಾನುಭವಿಗಳಿಗೆ ಸಮಸ್ಯೆ ಉಂಟಾಗುತ್ತದೆ.
ಬಿಳಿನೆಲೆ, ಕೈಕಂಬ, ಬೋಳ್ನಡ್ಕ, ಕೆಂಜಾಳ ಸೇರಿದಂತೆ ಒಟ್ಟು ನಾಲ್ಕು ಕಡೆಗಳಲ್ಲಿ ಬಿಳಿನೆಲೆ ಸಿಎ ಬ್ಯಾಂಕ್ ಮುಖಾಂತರ ಆಹಾರ ಇಲಾಖೆಯ ಪಡಿತರ ವಿತರಣೆ ಮಾಡಲಾಗುತ್ತಿದೆ. ಈ ಪೈಕಿ ಕೆಂಜಾಳದಲ್ಲಿರುವ ಬ್ಯಾಂಕಿನ ಶಾಖೆಯಲ್ಲಿ ಪಡಿತರ ವಿತರಣೆ ಮಾಡಲಾಗುತ್ತಿದೆ. ಈ ಭಾಗದಲ್ಲಿರುವ ಬಿಎಸ್‌ಎಲ್‌ಎಲ್ ನೆಟ್‌ವರ್ಕ್ ಸಮಸ್ಯೆಯಿಂದ ಪಡಿತರ ವಿತರಣೆಯಲ್ಲಿ ವಿಳಂಬವಾದರೂ ಇತ್ತೀಚಿನ ಕೋವಿಡ್ ಮಾರ್ಗಸೂಚಿಯ ಪಾಲನೆಯಿಂದಾಗಿ ಇನ್ನಷ್ಟು ಕಗ್ಗಂಟ್ಟಾಗಿದೆ.
ಇಲ್ಲಿ ವಾರದ ಮೂರು ದಿನ ಪಡಿತರ ವಿತರಣೆ ನಡೆಯುತ್ತದೆ. ವಿದ್ಯುತ್ ಇಲ್ಲವಾದಲ್ಲಿ ನೆಟ್‌ವರ್ಕ್ ಶೂನ್ಯವಾಗಿರುತ್ತದೆ. ವಿದ್ಯುತ್ ಇದ್ದಲ್ಲಿಯೂ ಗುಣಮಟ್ಟದ ನೆಟ್‌ವರ್ಕ್ ಇಲ್ಲದೆ ಪಡಿತರ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ. ನ್ಯಾಯ ಬೆಲೆಯ ಸಿಬ್ಬಂದಿ ಲ್ಯಾಪ್‌ಟ್ಯಾಪ್ ಹಿಡಿದು ಕಚೇರಿ ಪಕ್ಕದ ಗುಡ್ಡವನ್ನು ಏರಿದರೂ ಪ್ರಯೋಜನವಾಗುತ್ತಿಲ್ಲ. ಕೆಂಜಾಳ ಸುತ್ತಮುತ್ತಲಿನ ಅನಿಲ, ಮಣಿಬಾಂಡ, ಕಟ್ಟೆ ಪೇರುಂದೋಡಿ, ಬಗ್ಪುಣಿ, ಕಾಪಾರು, ಅಮ್ಚುರು, ಕೋಲ್ಪೆ, ಕಾರ್ಯತಡ್ಕ ಮೊದಲಾದ ಪ್ರದೇಶದವರು ಪಡಿತರಕ್ಕಾಗಿ ಕೆಂಜಾಳದಲ್ಲಿ ಶಾಖೆಯನ್ನು ಆಶ್ರಯಿಸಿದ್ದಾರೆ. ಈ ನಿಟ್ಟಿನಲ್ಲಿ ಕುಗ್ರಾಮವಾಗಿರುವ ಕೆಂಜಾಳದಲ್ಲಿ ಎದುರಾಗಿರುವ ನೆಟ್‌ವರ್ಕ್ ಸಮಸ್ಯೆ ನೀಗಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ ನಿತ್ಯ ನಿರಂತರ. ಕೋವಿಡ್ ನಿಯಮಾವಳಿಯನ್ನು ಪಾಲಿಸುವ ಸಂದರ್ಭ ಪಡಿತರ ವಿತರಣೆಗೆ ನೆಟ್‌ವರ್ಕ್ ಸಮಸ್ಯೆ ಬಾಧಿಸುತ್ತಿದೆ. ಫಲಾನುಭವಿಗಳಿಗೆ ಸಾಕಷ್ಟು ತೊಂದರೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು.ಗಣೇಶ್ ಅನಿಲ, ಸಾಮಾಜಿಕ ಕಾರ್ಯಕರ್ತ ಬಿಳಿನೆಲೆ ಸಿಎ ಬ್ಯಾಂಕ್ ಮುಖಾಂತರ ಆಹಾರ ಇಲಾಖೆಯ ಪಡಿತರ ವಿತರಣೆಯನ್ನು ಬಿಳಿನೆಲೆ, ಬೋಳ್ನಡ್ಕ, ಕೈಕಂಬ, ಕೆಂಜಾಳ ಒಟ್ಟು ನಾಲ್ಕು ಕಡೆಗಳಲ್ಲಿ ಮಾಡಲಾಗುತ್ತಿದೆ. ಪಡಿತರ ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದಂತೆ ಪ್ರಯತ್ನಿಸಲಾಗುತ್ತಿದೆ. ಆದರೆ ಕೆಂಜಾಳ ಶಾಖೆಯಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ತೊಂದರೆಯಾಗುತ್ತಿದೆ. ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಮಾತ್ರ ಈ ಭಾಗದಲ್ಲಿರುವುದರಿಂದ ಅದನ್ನೆ ಆಶ್ರಯಿಸಬೇಕಾಗಿದೆ. ಬಿಎಸ್‌ಎನ್‌ಎಲ್ ಕೇಬಲ್ ನೆಟ್‌ವರ್ಕ್ ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ನೆಟ್‌ವರ್ಕ್ ಸಮಸ್ಯೆ ನೀಗಿಸುವ ಸಲುವಾಗಿ ಸಂಬಂಧಪಟ್ಟವರಿಗೆ ಮನವಿ ಮಾಡಲಾಗಿದೆ.ದಾಮೋದರ ಗುಂಡ್ಯ, ಅಧ್ಯಕ್ಷರು,