ಕಂಪ್ಲಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಬಜಾರ ಹಮಾಲಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ಸೋಮವಾರ ತಹಸೀಲ್ದಾರ್ ಎಸ್.ಶಿವರಾಜಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಸಿ.ಹುಸೇನಪ್ಪ ಮಾತನಾಡಿ, ಅಸಂಘಟಿತ ಕಾರ್ಮಿಕರಲ್ಲಿ ಶ್ರಮದಾಯಕ ಕೆಲಸ ನಿರ್ವಹಿಸುವ ಹಮಾಲರ ಬೇಡಿಕೆಗಳನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ. ಅನಾರೋಗ್ಯದಿಂದ ಸಂಕಷ್ಟಕ್ಕೀಡಾಗುವ ಹಮಾಲಿ ಕಾರ್ಮಿಕರು ಬದುಕಿದ್ದಾಗಲೇ ಸಾಮಾಜಿಕ ಭದ್ರತೆ ಒದಗಿಸಬೇಕು.
ಕಾರ್ಮಿಕರ ಭವಿಷ್ಯ ನಿಧಿ, ಪಿಂಚಣಿ, ವಸತಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಸಂಘದ ಕಾರ್ಯದರ್ಶಿ ಮಾನ್ವಿ ಮಹೇಶ ಮಾತನಾಡಿ, ಹಮಾಲರ ಮರಣ ಪರಿಹಾರ ಧನವನ್ನು 2 ಲಕ್ಷ ರೂ.ಗೆ ಹೆಚ್ಚಿಸಬೇಕು. 60ವರ್ಷ ಮೇಲ್ಪಟ್ಟ ಹಮಾಲರಿಗೆ ಒಂದು ಲಕ್ಷ ರೂ. ನಿವೃತ್ತಿ ಪರಿಹಾರ ನೀಡಬೇಕು.
ಲೋಡಿಂಗ್, ಅನ್ ಲೋಡಿಂಗ್‌ಗೆ ಕೂಲಿ ದರ ನಿಗದಿ, ಕನಿಷ್ಟ ವೇತನ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಹಮಾಲರ ಸಂಘದ ಉಪಾಧ್ಯಕ್ಷ ಜಾಲಹಳ್ಳಿ ನಾಗರಾಜ, ಪ್ರಮುಖರಾದ ತಾಯಪ್ಪ, ಡಿ.ಮುನಿಸ್ವಾಮಿ, ಗೌಳೇರು ನಾಗರಾಜ, ಸಿ.ಸೂರಿ, ವಿ.ಶ್ರೀನಿವಾಸ, ಚಾಂದ್‌ಬಾಷಾ, ಕೃಷ್ಣ ಇತರರಿದ್ದರು.