ಉಜ್ಜಿನಿ: ಪ್ರಸಕ್ತ ವರ್ಷ ಎಲ್ಲೆಡೆ ಉತ್ತಮ ಮಳೆಯಾಗಿದ್ದು, ಬಹುತೇಕ ಕೆರೆ, ಕಟ್ಟೆಗಳು ತುಂಬಿವೆ. ಇದರಿಂದ ರೈತರಿಗೆ ಅನುಕೂಲವಾಗಿದೆ ಎಂದು ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.
ಹಲವು ವರ್ಷಗಳ ನಂತರ ಮಳೆಗೆ ತುಂಬಿದ ಇಲ್ಲಿನ ಮಾಚೇನಹಳ್ಳಿ ಕೆರೆಗೆ ಶುಕ್ರವಾರ ಬಾಗಿನ ಅರ್ಪಿಸಿ ಮಾತನಾಡಿದರು. ಜಲಮೂಲಗಳು ತುಂಬಿರುವುದರಿಂದ ಮುಂದಿನ ದಿನಗಳಲ್ಲಿ ಜನ ಜಾನುವಾರುಗಳಿಗೆ ನೀರಿನ ಸಮಸ್ಯೆ ತಪ್ಪಲಿದೆ.
ಪ್ರತಿ ವರ್ಷವೂ ಇದೇ ರೀತಿ ಮಳೆಯಾಗಿ ಸಮೃದ್ಧ ಫಸಲು ಬರಲಿ. ಆ ಮೂಲಕ ರೈತರ ಬದುಕು ಹಸನಾಗಲಿ ಎಂದು ಆಶೀರ್ವಚನ ನೀಡಿದರು.
ಉಜ್ಜಿನಿ ಗ್ರಾಪಂ ಅಧ್ಯಕ್ಷೆ ನಿಂಗಮ್ಮ, ಉಪಾಧ್ಯಕ್ಷೆ ಪುಷ್ಪಾವತಿ ರೇವಣಸಿದ್ದಪ್ಪ, ಸದಸ್ಯರಾದ ಬಂಗಾರಿ ಶಿವಣ್ಣ, ಕುರುಗೋಡು ಸಿದ್ದೇಶ್, ಪ್ರಮುಖರಾದ ಡಾಕ್ಟರ್ ವೆಂಕಟೇಶ್, ಕಮ್ಮಾರ ಎರಿಸ್ವಾಮಿ, ಸುರೇಶ ಒಡೆಯರ್, ಸಣ್ಣ ರಂಗಪ್ಪ, ಸುಣಗಾರ್ ನಾಗಣ್ಣ, ಚನ್ನವೀರ ಸ್ವಾಮಿ, ಎರಿಸ್ವಾಮಿ ಮರುಳಸಿದ್ದಪ್ಪ, ಜಂಬಣ್ಣ, ಸುಣ್ಣಗಾರ ಶಿವಣ್ಣ, ಮಡಿವಾಳರ ಮಳ್ಳಜ್ಜ, ನಡುಮಾವಿನಳ್ಳಿ ನಾಗೇಂದ್ರಪ್ಪ, ಕೊಟ್ರೇಶ್ ಇತರರಿದ್ದರು.