ಜಿಲ್ಲೆ

ಮಾರುಕಟ್ಟೆಗೆ ಹಾನಗಲ್ಲ ಆಪೂಸ್ ಲಗ್ಗೆ

Haveri

ಗಿರೀಶ ದೇಶಪಾಂಡೆ ಹಾನಗಲ್ಲ

ಹಾನಗಲ್ಲಿನ ಆಪೂಸ್ ತಳಿಯ ಮಾವು ದೇಶವಲ್ಲದೆ ವಿದೇಶಗಳಿಗೂ ರಫ್ತಾಗುವ ಮೂಲಕ ವಿಶ್ವ ವಿಖ್ಯಾತಿ ಪಡೆದಿದೆ. ಪ್ರಸಕ್ತ ವರ್ಷದ ಫಸಲು ಕೊಯ್ಲು ಕಾರ್ಯ ನಡೆದು ಖರೀದಿ ಪ್ರಕ್ರಿಯೆಯೂ ಆರಂಭಗೊಂಡಿದೆ.

ಹಾವೇರಿ ಜಿಲ್ಲೆಯ ಹವಾಮಾನ ಮತ್ತು ಭೂಮಿಯ ಗುಣಧರ್ಮ ಮಾವಿನಹಣ್ಣು ಬೆಳೆಯಲು ಉತ್ತಮವಾಗಿದೆ. ತಾಲೂಕಿನಲ್ಲಿ ಬೆಳೆಯುವ ಮಾವು ಹೆಚ್ಚು ತಿರುಳನ್ನು ಹೊಂದಿದ್ದು, ಹಣ್ಣಿನ ಸ್ವಾದವೂ ಹೆಚ್ಚಾಗಿರುತ್ತದೆ ಎಂದು ತೋಟಗಾರಿಕೆ ತಜ್ಞರು ಹೇಳುತ್ತಾರೆ. ಇಲ್ಲಿನ ಮಾವಿನಹಣ್ಣು ಮಹಾರಾಷ್ಟ್ರದ ರತ್ನಾಗಿರಿಯ ಆಪೂಸ್ ಮಾವಿನ ಹಣ್ಣುಗಳಿಗೆ ಸರಿಸಮನಾದ ಸ್ವಾದಿಷ್ಟತೆ ಹೊಂದಿದೆ. ಹೀಗಾಗಿ, ಹಾನಗಲ್ಲಿನ ಮಾವು ಮುಂಬೈ, ದೆಹಲಿ, ಗೋವಾ, ತಮಿಳುನಾಡು, ಆಂಧ್ರಪ್ರದೇಶ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ಆದರೆ, ಈ ಮಾವು ಹಾನಗಲ್ಲ ಹೆಸರಿನಲ್ಲಿರದೇ ಹಲವು ಕಂಪನಿಗಳ ಬ್ರ್ಯಾಂಡ್​ನೇಮ್ ಅಡಿ ವಿದೇಶಗಳಿಗೆ ರವಾನೆಯಾಗುತ್ತದೆ. ಹಾನಗಲ್ಲ ಬ್ರ್ಯಾಂಡ್​ನೇಮ್ ಅಡಿ ಮಾರಾಟ ಮಾಡುವಂತಾದರೆ, ಇಲ್ಲಿನ ಬೆಳೆಗಾರರಿಗೆ ಹೆಚ್ಚಿನ ಲಾಭ ದೊರೆಯಲಿದೆ. ಬೇರೆ ಬ್ರ್ಯಾಂಡ್​ಗಳಲ್ಲಿರುವುದರಿಂದ ಮಧ್ಯವರ್ತಿಗಳು ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ ಎಂಬುದು ಇಲ್ಲಿನ ಸ್ಥಳೀಯ ರೈತರ ಹತಾಶೆಗೆ ಕಾರಣವಾಗಿದೆ.

ಕಳೆದ ವರ್ಷ ಗುಣಮಟ್ಟದ ಮಾವಿಗೆ ಆರಂಭದಲ್ಲಿ ಪ್ರತಿ ಟನ್​ಗೆ 1 ಲಕ್ಷ ರೂಪಾಯಿಯಿಂದ 60 ಸಾವಿರ ರೂಪಾಯಿವರೆಗೆ ದರ ಸಿಕ್ಕಿತ್ತು. ಇದಲ್ಲದೆ, ಜ್ಯೂಸ್ ಫ್ಯಾಕ್ಟರಿಗೆ ಬಳಸುವ ಹಣ್ಣುಗಳಿಗೆ 20ರಿಂದ 55 ಸಾವಿರ ರೂಪಾಯಿವರೆಗೆ ದರ ದೊರಕಿತ್ತು. ಆದರೆ, ಆರಂಭದಲ್ಲಿರುವ ಹೆಚ್ಚಿನ ದರ ಕ್ರಮೇಣ ಫಸಲು ಹೆಚ್ಚು ಆವಕವಾಗುತ್ತಿದ್ದಂತೆ ಕುಸಿತಗೊಳ್ಳುತ್ತದೆ ಎಂಬುದು ಆತಂಕದ ಸಂಗತಿ. ಪ್ರಸ್ತುತ ಟನ್​ಗೆ 1.40 ಲಕ್ಷ ರೂಪಾಯಿ ದರವಿದೆ. ಎಳೆಯ ಕಾಯಿಗಳನ್ನೇ ಕೊಯ್ಲು ಮಾಡಿ ತರುತ್ತಿರುವುದರಿಂದ ಗುಣಮಟ್ಟದ ಆಧಾರದ ಮೇಲೆ ದರ ನಿಗದಿಯಾಗುತ್ತಿದೆ. ಇನ್ನೂ ಒಂದು ವಾರದ ನಂತರ ಗುಣಮಟ್ಟದ ಕಾಯಿಗಳ ಕೊಯ್ಲು ನಿರೀಕ್ಷಿಸಲಾಗಿದೆ. ಹಾನಗಲ್ಲಿನ ಎಚ್​ಕೆಎಚ್ ಮಂಡಿ ಹಾಗೂ ಎಪಿಎಂಸಿಯಲ್ಲಿ ಹಲವು ವರ್ಷಗಳಿಂದ ಮಾವು ಖರೀದಿ ನಡೆಯುತ್ತಿದೆ. ಈ ವರ್ಷ ಫಸಲು ಕುಸಿತವಾದ್ದರಿಂದ ಮಾರಾಟಗಾರರು ಹೆಚ್ಚು ಆಸಕ್ತಿ ವಹಿಸಲಿದ್ದಾರೆ.

ಕಳೆದ ವರ್ಷ ನಷ್ಟ: ಕಳೆದ ವರ್ಷ ಮಾವಿನ ಫಸಲು ಆಗಮಿಸುವ ಸಂದರ್ಭದಲ್ಲಿ ಕೋವಿಡ್ ಸೋಂಕಿನ ಅಲೆ ದೇಶಾದ್ಯಂತ ಹರಡಿಕೊಂಡಿದ್ದರಿಂದ ವಾಹನ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. ಹೀಗಾಗಿ, ಮಾವು ಹೊರ ರಾಜ್ಯಗಳಿಗೆ ರವಾನೆಯಾಗದೆ ರೈತರು ಸಮಸ್ಯೆ ಎದುರಿಸುವಂತಾಗಿತ್ತು. ಸ್ಥಳೀಯ ಮಾರುಕಟ್ಟೆಯಲ್ಲಿ ಕೈಗೆ ಬಂದ ದರಕ್ಕೆ ಹಣ್ಣನ್ನು ಮಾರಬೇಕಾಯಿತು. ದರವೂ ಹೆಚ್ಚು ಸಿಗದೆ ಬೆಳೆಗಾರರು ಆರ್ಥಿಕ ಸಂಕಷ್ಟ ಅನುಭವಿಸಿದ್ದರು.

ಮಳೆಯಿಂದಾಗಿ ಇಳುವರಿ ಕುಂಠಿತ: ಈ ವರ್ಷ ಪರಿಸ್ಥಿತಿ ಭಿನ್ನವಾಗಿದ್ದು, ಅಕಾಲಿಕ ಮಳೆಯಿಂದಾಗಿ ಮಾವಿನ ಫಸಲು ಕುಸಿತವಾಗಿದೆ. ಹಾನಗಲ್ಲ ತಾಲೂಕಿನಲ್ಲಿ 2500 ಹೆಕ್ಟೇರ್​ನಲ್ಲಿ ಮಾವು ಬೆಳೆಯಲಾಗುತ್ತಿದೆ. ರೈತರ 100 ಗಿಡಗಳಲ್ಲಿ ಬೆರಳೆಣಿಕೆಯಷ್ಟು ಗಿಡಗಳು ಫಲ ಬಿಟ್ಟಿವೆ. ಎಕರೆಗೆ 10 ಟನ್ ನಿರೀಕ್ಷಿಸಿದ್ದರೂ ಶೇ. 75ರಷ್ಟು ಫಸಲು ಕುಂಠಿತವಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಮಾವು ಬೆಳೆ ಲಾಭದಾಯಕವಲ್ಲ ಎಂಬ ನಿರ್ಣಯಕ್ಕೆ ಬರುತ್ತಿರುವ ರೈತರು ಹತ್ತಾರು ವರ್ಷಗಳಿಂದ ಬೆಳೆಸಿದ್ದ ಗಿಡಗಳನ್ನು ಕಿತ್ತೆಸೆಯುತ್ತಿದ್ದಾರೆ. ತೋಟಗಾರಿಕೆ ಇಲಾಖೆ, ರಾಜ್ಯ ಸರ್ಕಾರವು ಮಾವು ಬೆಳೆ ಉಳಿಸಲು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕಾಗಿದೆ. ರಾಜ್ಯದ ಪ್ರಮುಖ ನಗರಗಳಿಂದ ರಫ್ತು ಉದ್ಯಮಕ್ಕೆ ಮಾವು ಒಳಪಡಿಸಬೇಕಿದೆ. ಮಾವು ಸಂಸ್ಕರಣ ಘಟಕ, ಜ್ಯೂಸ್ ಫ್ಯಾಕ್ಟರಿಗಳ ಸ್ಥಾಪನೆ, ಉಪ ಉತ್ಪನ್ನಗಳ ತಯಾರಿಕೆ ಘಟಕಗಳು ಆರಂಭಗೊಳ್ಳಬೇಕಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ಆನ್​ಲೈನ್ ಮಾರ್ಕೆಟ್ ಯೋಜನೆ: ಸ್ವಾದಿಷ್ಟ, ಗುಣಮಟ್ಟದ ಮಾವಿನ ಹಣ್ಣುಗಳನ್ನು ಮಾರುಕಟ್ಟೆಯಲ್ಲಿ ಜನ ಎದುರು ನೋಡುತ್ತಿದ್ದಾರೆ. ಸ್ಥಳೀಯ ಕುಮಾರೇಶ್ವರ ರೈತ ಉತ್ಪಾದಕ ಸಂಘ ನೇರವಾಗಿ ಜನರ ಮನೆ ಬಾಗಿಲಿಗೆ ಖಾಸಗಿ ಮಾರುಕಟ್ಟೆ ದರದಲ್ಲಿ ಮಾವಿನ ಹಣ್ಣುಗಳನ್ನು ತಲುಪಿಸುವ ಯೋಜನೆ ರೂಪಿಸುತ್ತಿದೆ. ಕಳೆದ ವರ್ಷ ಪ್ರಮುಖ ಬಹುಮಹಡಿ ಕಟ್ಟಡಗಳಿಗೆ ಪ್ರಾಯೋಗಿಕವಾಗಿ ಹಣ್ಣುಗಳನ್ನು ತಲುಪಿಸಿತ್ತು. ವೆಬ್​ಸೈಟ್ ಅನ್ನೂ ಬಿಡುಗಡೆಗೊಳಿಸುತ್ತಿದೆ. ಆನ್​ಲೈನ್ ಮೂಲಕ ಬೇಡಿಕೆ ಸ್ವೀಕರಿಸಿ, ಮಾರಲು ಮುಂದಾಗುತ್ತಿದೆ.

ಮಾವಿನ ಫಸಲಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದ್ದರಿಂದ, ಉತ್ಕೃಷ್ಟ ಮಾವು ಬೆಳೆಯಿಂದ ರೈತರು ವಿಮುಖರಾಗಬಾರದೆಂಬ ಹಿನ್ನೆಲೆಯಲ್ಲಿ ರೈತ ಉತ್ಪಾದಕ ಸಂಘಗಳಿಗೆ ಆರ್ಥಿಕ ನೆರವು ನೀಡಲು ಸರ್ಕಾರ ಉದ್ದೇಶಿಸಿದೆ. ಈ ಸಂಘಗಳು ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು, ಯೋಗ್ಯ ದರದಲ್ಲಿ ಖರೀದಿ ಪ್ರಕ್ರಿಯೆ ಆರಂಭಿಸಲು ಸಿದ್ಧಗೊಳ್ಳಲಿವೆ. ಹಾವೇರಿ ಜಿಲ್ಲೆಯ ಮಾವು, ಹಸಿಮೆಣಸು, ಗೋವಿನಜೋಳ, ತರಕಾರಿ ಖರೀದಿಸಲು ಮಾರುಕಟ್ಟೆ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.| ಶಿವಕುಮಾರ ಉದಾಸಿ, ಸಂಸದ