ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಸಿದ್ದ ಬರ ಹಾಗೂ ಗಾಂಧಿ ಜಯಂತಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತಾನಾಡಿದರು. ತಾಪಂ ಇಒ ವೈ. ರವಿಕುಮಾರ್, ತಹಸೀಲ್ದಾರ್ ಟಿ.ಜಗದೀಶ ಇದ್ದರು. 
ಜಿಲ್ಲೆ

ಜಮೀನುಗಳಿಗೆ ಭೇಟಿ ನೀಡಿ ನೈಜ ವರದಿ ನೀಡಿ

ರುದ್ರಪ್ಪ ವಾಲಿ

ಕೂಡ್ಲಿಗಿ: ಲೂಕಿನಲ್ಲಿ ಬರ ಆವರಿಸಿದ್ದು ಸಂಬಂಧಿಸಿದ ಅಧಿಕಾರಿಗಳು ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಸೂಚನೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಬರ ಹಾಗೂ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮದ ರೂಪುರೇಷೆ ಕುರಿತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಸ್ವಚ್ಛತಾ ಕಾರ್ಯಕ್ರಮ

ಬೆಳೆ ಹಾನಿಯ ಪ್ರಮಾಣ ತಾಲೂಕಿನಲ್ಲಿ ಎಷ್ಟಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಸುನೀಲ್ ಕುಮಾರ ಅವರನ್ನು ಪ್ರಶ್ನಿಸಿದರು. ಕೃಷಿ ಅಧಿಕಾರಿ ಸುನೀಲ್ ಕುಮಾರ್ ಮಾತನಾಡಿ, ತಾಲೂಕಿನಾದ್ಯಂತ ಶೇ.55 ಬೆಳೆ ಹಾನಿಯಾಗಿದ್ದು ಮೆಕ್ಕೆಜೋಳ, ಜೋಳ, ಶೇಂಗಾ ಮಳೆ ಕೊರತೆಯಿಂದ ರೈತರು ಬಿತ್ತಿದ ಬಂಡವಾಳ ಕೈಸೇರುವುದು ಕಷ್ಟಕರವಾಗಿದೆ ಎಂದು ತಿಳಿಸಿದರು. ತೋಟಗಾರಿಕೆ ಬೆಳೆ ತಾಲೂಕಿನಲ್ಲಿ ಕೇವಲ 25 ಲಕ್ಷ ರೂ.ನಷ್ಟು ಹಾನಿಯಾಗಿದೆ ಎಂದು ವರದಿ ನೀಡಿದ್ದಕ್ಕೆ ಅಸಮಾಧಾನಗೊಂಡ ಶಾಸಕರು ರೈತರ ಜಮೀನುಗಳಿಗೆ ಭೇಟಿ ನೀಡಿ ನೈಜ ವರದಿ ನೀಡಿ ಬೇಕಾಬಿಟ್ಟಿ ವರದಿ ನೀಡಬೇಡಿ ಎಂದರು.
ಪಶುಸಂಗೋಪನೆ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಡಾ.ಲೋಹಿತ್ ಕುಮಾರ್ ಮಾಹಿತಿ ನೀಡಿ, ಜಾನುವಾರುಗಳಿಗೆ ಜನವರಿವರೆಗೂ ಯಾವುದೇ ಮೇವಿನ ಕೊರತೆ ಎದುರಾಗದು ಎಂದರು.

ನಂತರ ಮಾತನಾಡಿದ ಶಾಸಕರು ಈಗಾಗಲೇ ಬರ ಪಟ್ಟಿಯಲ್ಲಿ ತಾಲೂಕು ಸೇರ್ಪಡೆಯಾಗಿದ್ದು ಅಧಿಕಾರಿಗಳು ಬರಕ್ಕೆ ಪೂರಕವಾಗಿ ಕೆಲಸ ನಿರ್ವಹಿಸಬೇಕು ಉದಾಸೀನ ಮಾಡದೇ ರೈತರಿಗೆ ಅನುಕೂಲ ರೀತಿಯಲ್ಲಿ ಕಾರ್ಯ ಮಾಡಬೇಕು. ಮುಂದಿನ ದಿನಗಳಲ್ಲಿ ಬರ ವೀಕ್ಷಣೆಗೆ ಖುದ್ದು ನಾನೇ ಅಧಿಕಾರಿಗಳೊಂದಿಗೆ ರೈತರ ಜಮೀನುಗಳಿಗೆ ತೆರಳಿ ವರದಿ ತಯಾರಿಸಲು ಸೂಚಿಸುವೆ ಎಂದರು.
ಗಾಂಧಿ ಜಯಂತಿ ಅಂಗವಾಗಿ ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮ, ಶಾಲೆ ಹಾಗೂ ಕಚೇರಿಗಳು ಹಾಗೂ ಸುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿರಿಸಲು ಆದ್ಯತೆ ನೀಡುವಂತೆ ತಿಳಿಸಿದರು. ಈ ಕಾರ್ಯ ಗಾಂಧಿ ಜಯಂತಿಗೆ ಸೀಮಿತ ಮಾಡದೇ ಪ್ರತಿ ನಿತ್ಯವು ಸ್ವಚ್ಛತಾ ಕಾರ್ಯ ಹಾಗೂ ಘನತ್ಯಾಜ್ಯ ನಿರ್ವಹಣೆಗೂ ಆದ್ಯತೆ ನೀಡಬೇಕು ಎಂದು ಪಿಡಿಒಗಳಿಗೆ ಖಡಕ್ ಆಗಿ ತಿಳಿಸಿದರು.
ತಾಪಂ ಇಒ ವೈ. ರವಿಕುಮಾರ್, ತಹಸೀಲ್ದಾರ್ ಟಿ.ಜಗದೀಶ್, ಬರ ಪರಿಸ್ಥಿತಿ ನೋಡಲ್ ಅಧಿಕಾರಿ ಅಂದಾನಯ್ಯ ಸ್ವಾಮಿ ಇತರರಿದ್ದರು.