ಬೆಳಗಾವಿ: ಕರೊನಾ ವೈರಸ್ ಹಿನ್ನೆಲೆಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರವು ಇ-ಲೋಕ ಅದಾಲತ್ ನಡೆಸಲು ಪ್ರಾರಂಭಿಸಿದೆ. ಎಲ್ಲರಿಗೂ ಸಮಾನ ಅವಕಾಶ ಹಾಗೂ ನ್ಯಾಯ ಸಿಗಬೇಕು ಎಂಬುದು ಇ-ಲೋಕ ಅದಾಲತ್‌ನ ಮುಖ್ಯ ಉದ್ದೇಶವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅರವಿಂದಕುಮಾರ ತಿಳಿಸಿದ್ದಾರೆ.
ಕರೊನಾ ಹಿನ್ನೆಲೆಯಲ್ಲಿ ಮೆಗಾ ಇ-ಲೋಕ ಅದಾಲತ್ ನಡೆಸುವ ಕುರಿತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು. ಇ -ಲೋಕ
ಅದಾಲತ್‌ಗೆ ಸಂಬಂಧಿಸಿ ಇಲ್ಲಿಯವರೆಗೆ ನಾಲ್ಕು ಸಭೆ ನಡೆಸಿದ್ದೇವೆ. ಆ ಸಭೆಯಲ್ಲಿ ವಿಮೆ ಕಂಪನಿಗಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಅಪಘಾತ ಸಂಭವಿಸಿದ ನಂತರ ವಿಮೆ ಕಂಪನಿಯಿಂದ ಅಪಘಾತಕ್ಕೆ ಒಳಗಾದ ಕುಟುಂಬಕ್ಕೆ ಸಹಾಯ ಒದಗಬೇಕು ಎಂದು ತಿಳಿಸಿದರು.
ಶೀಘ್ರ ವೆಬ್‌ಸೈಟ್ ಬಿಡುಗಡೆ: ಅಪಘಾತದಲ್ಲಿ ಒಬ್ಬ ವ್ಯಕ್ತಿ ತೀರಿಕೊಂಡರೆ, ತೀರಿಹೋದ ವ್ಯಕ್ತಿಯ ಕುಟುಂಬಕ್ಕೆ ವಿಮೆ ಹಣ ಸಿಗಬೇಕು ಎಂಬುದು ಅದಾಲತ್‌ನ ಗುರಿ ಆಗಿದೆ. ಪ್ರತಿ ಜಿಲ್ಲೆ ಹಾಗೂ ಪ್ರತಿ ತಾಲೂಕಿನಲ್ಲಿ ಇ-ಲೋಕ ಅದಾಲತ್ ನಡೆಸಬೇಕು. ಸಮಾಜದ ಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಅದಕ್ಕಾಗಿ ಮಾಧ್ಯಮಗಳು ಇ -ಲೋಕ ಅದಾಲತ್ ಬಗ್ಗೆ ಜನರಿಗೆ ತಿಳಿಸಬೇಕು. ಅದಾಲತ್‌ಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ವೆಬ್‌ಸೈಟ್ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.
ವಿಡಿಯೋ ಕಾನ್ಫರೆನ್ಸ ಮೂಲಕ ನಡೆದ ಸುದ್ದಿಗೋಷ್ಠಿಯಲ್ಲಿ ಬೆಳಗಾವಿ ಸೇರಿ ರಾಜ್ಯದ 30 ಜಿಲ್ಲೆಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದವರು ಪಾಲ್ಗೊಂಡಿದ್ದರು.