ಚನ್ನಮ್ಮ ಕಿತ್ತೂರು ತಾಲೂಕಿನ ಬೈಲೂರು ಗ್ರಾಮದ ನಿಷ್ಕಲ ಮಂಟಪದ ಸಭಾಭವನದಲ್ಲಿ ಜರುಗಿದ ಸಭೆಯಲ್ಲಿ ನಿಜಗುಣಾನಂದ ಸ್ವಾಮೀಜಿ ಮಾತನಾಡಿದರು. ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಪಂಚಾಕ್ಷರಿ ಸ್ವಾಮೀಜಿ, ವೀರೇಶ್ವರ ಸ್ವಾಮೀಜಿ, ವೀರೇಶ ದೇವರು ಇದ್ದರು. 
ಜಿಲ್ಲೆ

ನೀರಾವರಿಗಾಗಿ ಜನ ಜಾಗೃತಿ ಮೂಡಿಸಿ

ಚನ್ನಮ್ಮ ಕಿತ್ತೂರು: ತಾಲೂಕಿನ ಬೈಲೂರು ಗ್ರಾಮದ ನಿಷ್ಕಲ ಮಂಟಪದ ಸಭಾಭವನದಲ್ಲಿ ಕೆನಾಲ್ ನಿರ್ಮಾಣ ಹೋರಾಟ ಸಮಿತಿ ಶುಕ್ರವಾರ ಏರ್ಪಡಿಸಿದ್ದ ಮಠಾಧೀಶರು ಮತ್ತು ಸಾರ್ವಜನಿಕರ ಸಭೆಯಲ್ಲಿ ಮಲಪ್ರಭಾ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಿ ಕಿತ್ತೂರು ಭಾಗದ ಹಳ್ಳಿಗಳ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ಅನುಷ್ಠಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂಬ ನಿರ್ಣಯವನ್ನು ಈ ಭಾಗದ ಮಠಾಧೀಶರು ಕೈಗೊಂಡಿದ್ದಾರೆ.

ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ಕಾಲುವೆ ಮುಖಾಂತರ ಯೋಜನೆಯ ಲಾಭ ಪಡೆಯುವ ಗ್ರಾಮಗಳ ರೈತರಲ್ಲಿ ಮೊದಲು ಈ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ಹಳ್ಳ ಅಥವಾ ನದಿ ಮೂಲದಿಂದ ನೀರು ಹರಿಸುವ ಯೋಚನೆಗೆ ಪರಿಣಿತರ ಜತೆ ಚರ್ಚಿಸಿ ಅಂತಿಮ ರೂಪ ನೀಡಬೇಕು ಎಂದರು. 247 ಕೋಟಿ ರೂ.ವೆಚ್ಚದಲ್ಲಿ ಕಿತ್ತೂರು ಭಾಗದ ವಿವಿಧ ಊರಿನ ಕೆರೆಗಳ ತುಂಬುವ ಮಹತ್ವಾಕಾಂಕ್ಷಿ ಯೋಜನೆಯು ಇನ್ನೂ ಕಾರ್ಯಾರಂಭಗೊಂಡಿಲ್ಲ. ಅದರ ಅನುಷ್ಠಾನಕ್ಕೆ ಕ್ರಮ ಕೈಗೊಂಡು ಕಾಮಗಾರಿಗೆ ವೇಗ ಕಲ್ಪಿಸಬೇಕಿದೆ ಎಂದು ಹೇಳಿದರು. ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಮಾತನಾಡಿ, ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಮಹದಾಯಿ ನೀರು ಹಂಚಿಕೆ ಬಗ್ಗೆ ಈಗಾಗಲೇ ನ್ಯಾಯ ಮಂಡಳಿ ಆದೇಶ ನೀಡಿದೆ. ಅದಕ್ಕೆ ಎಲ್ಲ ರಾಜ್ಯಗಳು ಬದ್ಧವಾಗಿರಬೇಕು. ಇದನ್ನು ಇತ್ಯರ್ಥ ಪಡಿಸುವ ಅಧಿಕಾರ ಸುಪ್ರೀಂ ಕೋರ್ಟಿಗೆ ಇಲ್ಲ. ಈ ಆದೇಶವನ್ನು ಮರುಪರಿಶೀಲಿಸಬೇಕು ಎಂಬ ಬಗ್ಗೆ ಮಾತ್ರ ಸುಪ್ರೀಂ ಕೋರ್ಟಿಗೆ ಹೋಗುವ ಅಧಿಕಾರವಿದೆ ಎಂದರು.

ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮತ್ತು ನಿಚ್ಚಣಕಿಯ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, ಪಕ್ಷಾತೀತವಾಗಿ ಹೋರಾಟ ಮುಂದುವರಿಸಬೇಕು ಎಂದರು. ಹಬೀಬ ಶಿಲ್ಲೇದಾರ, ಜಿಪಂ ಮಾಜಿ ಸದಸ್ಯ ಶಿವನಸಿಂಗ್ ಮೊಕಾಶಿ, ಎಂ.ಎಫ್.ಜಕಾತಿ, ಮೋಹನ ಹಂಚಿನಮನಿ ಮಾತನಾಡಿದರು. ವೀರೇಶ್ವರ ಸ್ವಾಮೀಜಿ, ವೀರೇಶ ದೇವರು ಸಾನ್ನಿಧ್ಯ ವಹಿಸಿದ್ದರು.