ಹುಬ್ಬಳ್ಳಿ : ಹುಬ್ಬಳ್ಳಿ-ಪುಣೆ ಮಧ್ಯೆ ಟ್ರೖೆ ವೀಕ್ಲಿ ವಂದೇ ಭಾರತ್ ರೈಲು ಸಂಚಾರ ಪ್ರಾರಂಭಿಸುವ ಕುರಿತು ನೈಋತ್ಯ ರೈಲ್ವೆ ವಲಯ ಶುಕ್ರವಾರದಂದು ಅಧಿಕೃತ ಪ್ರಕಟಣೆ ಹೊರಡಿಸಿದೆ.
ಎಸ್ಎಸ್ಎಸ್ ಹುಬ್ಬಳ್ಳಿ- ಪುಣೆ -ಎಸ್ಎಸ್ಎಸ್ ಹುಬ್ಬಳ್ಳಿ ಮಧ್ಯೆ ಸಂಚರಿಸುವ ಈ ರೈಲು ಎರಡು ವಾಣಿಜ್ಯ ಮಹಾನಗರಗಳನ್ನು ಸಂರ್ಪಸುವ ಕೊಂಡಿಯಾಗಿದೆ.
ಸೆ. 16ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ್ ರೈಲು ಸಂಚಾರಕ್ಕೆ ವರ್ಚ್ಯುವಲ್ ಮೂಲಕ ಚಾಲನೆ ನೀಡುವರು. ಅಂದು ಈ ರೈಲು ಪುಣೆಯಿಂದ ಮಧ್ಯಾಹ್ನ 4.15ಕ್ಕೆ ಹೊರಟು, ರಾತ್ರಿ 11.40ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ. ಅಂದು ಈ ರೈಲು ಮೀರಜ್ (ರಾತ್ರಿ 7.15/7.20), ಬೆಳಗಾವಿ (9/9.10) ಮತ್ತು ಧಾರವಾಡ (11.05/11.10) ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ. ಉದ್ಘಾಟನಾ ಸಮಯದಲ್ಲಿ ಸಂಚರಿಸುವ ಈ ರೈಲು ಒಟ್ಟು 8 ಬೋಗಿಗಳನ್ನು ಒಳಗೊಂಡಿದೆ.
ಸೆ. 18 ರಿಂದ ಈ ರೈಲು ವಾರದಲ್ಲಿ ಮೂರು ದಿನ ಸಂಚರಿಸಲಿದೆ. ಸೆ. 18 ರಿಂದ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹಾಗೂ ಸೆ. 19 ರಿಂದ ಪುಣೆಯಿಂದ ನೂತನ ವಂದೇ ಭಾರತ್ ರೈಲು ಸಂಚರಿಸಲಿದೆ.
ಪ್ರತಿ ಬುಧವಾರ, ಶುಕ್ರವಾರ ಮತ್ತು ಭಾನುವಾರದಂದು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಬೆಳಗಿನಜಾವ 5 ಗಂಟೆಗೆ ಹೊರಡುವ ರೈಲು, ಅದೇ ದಿನ ಮಧ್ಯಾಹ್ನ 1.30ಕ್ಕೆ ಪುಣೆ ತಲುಪಲಿದೆ.
ಪ್ರತಿ ಗುರುವಾರ, ಶನಿವಾರ ಮತ್ತು ಸೋಮವಾರ ಪುಣೆಯಿಂದ ಮಧ್ಯಾಹ್ನ 2.15ಕ್ಕೆ ಹೊರಡುವ ರೈಲು, ಅದೇ ದಿನ ರಾತ್ರಿ 10.45ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.
ಧಾರವಾಡ, ಬೆಳಗಾವಿ, ಮೀರಜ್, ಸಾಂಗ್ಲಿ ಮತ್ತು ಸತಾರಾ ನಿಲ್ದಾಣಗಳಿಗೆ ಈ ವಂದೇ ಭಾರತ್ ರೈಲಿಗೆ ನಿಲುಗಡೆ ಸೌಲಭ್ಯ ಒದಗಿಸಲಾಗಿದೆ.
ಈ ರೈಲು ಒಟ್ಟು 8 ಬೋಗಿಗಳೊಂದಿಗೆ ಸಂಚರಿಸಲಿದ್ದು, ಇದರಲ್ಲಿ 52 ಎಕ್ಸಿಕ್ಯೂಟಿವ್ ಕ್ಲಾಸ್ ಸೀಟ್ಗಳು ಮತ್ತು 478 ಚೇರ್ ಕಾರ್ ಸೀಟುಗಳು ಇರಲಿವೆ.