ಜಿಲ್ಲೆ

ದ್ರಾಕ್ಷಿ ಬೆಳೆಗಾರರಿಗೆ ಪರಿಹಾರ ಕಲ್ಪಿಸಲಿ

ಐಗಳಿ: ದ್ರಾಕ್ಷಿ ಬೆಳೆಗಾರರು ಹತ್ತಾರು ವರ್ಷಗಳಿಂದ ನಷ್ಟ ಅನುಭವಿಸುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಅವರ ಕಷ್ಟ ಪರಿಹಾರೋಪಾಯಕ್ಕಾಗಿ ಮಾರ್ಗಸೂಚಿ ಹೊರಡಿಸಬೇಕು ಎಂದು ಅಥಣಿ ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ ಆಗ್ರಹಿಸಿದರು.

ಇಲ್ಲಿನ ಒಣದ್ರಾಕ್ಷಿ ಸಂಸ್ಕರಣಾ ಘಟಕದಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ವರ್ಷದಿಂದ ವರ್ಷಕ್ಕೆ ಕೂಲಿ, ಗೊಬ್ಬರ ಮತ್ತು ಕೀಟನಾಶಕಗಳ ಬೆಲೆ ಏರಿಕೆಯಾಗುತ್ತಿದೆ. ಕೆಜಿ ಒಣ ದ್ರಾಕ್ಷಿ ತಯಾರಾಗಲು 130-140 ರೂ. ಖರ್ಚಾಗುತ್ತದೆ. ಆದರೆ, 110-120 ರೂ.ಗೆ ದ್ರಾಕ್ಷಿ ಮಾರಾಟವಾಗುತ್ತಿದೆ. ಇದರಿಂದ ದ್ರಾಕ್ಷಿ ಬೆಳೆಗಾರರಿಗೆ ಹಾನಿ ಯಾಗುತ್ತಿದೆ. ಹವಾಮಾನ ವೈಪರೀತ್ಯದಿಂದಾಗುವ ಹಾನಿಗೆ ಸರ್ಕಾರ ಪರಿಹಾರ ನೀಡುತ್ತಿಲ್ಲ.

ದ್ರಾಕ್ಷಿ ಬೆಳೆಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಆದಾಯವಿದೆ. ದ್ರಾಕ್ಷಿ ಬೆಳೆಗಾರರನ್ನು ನಿರ್ಲಕ್ಷಿಸದೆ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಅಡಿ ಪರಿಹಾರ ಒದಗಿಸಬೇಕು. ವಿದೇಶಗಳಿಗೆ ಮಾರಾಟ ಮಾಡಲು ಸರಳ ಮಾರ್ಗೋಪಾಯ ಕಲ್ಪಿಸಬೇಕು ಎನ್ನುವ ಬೇಡಿಕೆಗಳನ್ನು ಸಂಬಂಧಿಸಿದವರಿಗೆ ಮನವರಿಕೆ ಮಾಡಲು ಅಥಣಿ, ವಿಜಯಪುರ, ಬಾಗಲಕೋಟೆ ತಾಲೂಕಿನ ದ್ರಾಕ್ಷಿ ಬೆಳೆಗಾರ ಮುಖಂಡರ ನಿಯೋಗದೊಂದಿಗೆ ತೆರಳಲಿದ್ದೇವೆ ಎಂದರು.

ಮುಖಂಡರಾದ ಆರ್.ಆರ್.ತೆಲಸಂಗ, ಪ್ರಕಾಶ ಪಾಟೀಲ, ಅಪ್ಪಾಸಾಹೇಬ ಮಾಕಾಣಿ, ದಸ್ತಗೀರಸಾಬ್ ಕೊರಬು, ಅಂಬಣ್ಣ ಬಿರಾದಾರ ಇತರರು ಇದ್ದರು.