ಹೂವಿನಹಡಗಲಿ ಮದಲಗಟ್ಟಿ ವೃತ್ತದ ಬಳಿಯ ಗೊಬ್ಬರದ ಗೋದಾಮಿನಲ್ಲಿ ಸರದಿಸಾಲಿನಲ್ಲಿ ನಿಂತು ರೈತರು ಗೊಬ್ಬರ ಖರೀದಿಸುತ್ತಿರುವುದು. 
ಜಿಲ್ಲೆ

ರಸಗೊಬ್ಬರಕ್ಕಾಗಿ ಮುಗಿಬಿದ್ದ ರೈತರು

ಹೂವಿನಹಡಗಲಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಯೂರಿಯಾ ಗೊಬ್ಬರದ ಅಭಾವ ಸೃಷ್ಟಿಯಾಗಿದ್ದು, ರಸಗೊಬ್ಬರಕ್ಕಾಗಿ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿಗೆ ಒಟ್ಟು 11 ಸಾವಿರ ಟನ್ ರಸಗೊಬ್ಬರ ಅವಶ್ಯಕತೆ ಇದ್ದು, ಈಗಾಗಲೇ 10 ಸಾವಿರ ಟನ್ ಯೂರಿಯಾ ಪೂರೈಕೆಯಾಗಿದೆ.

ಆದರೆ, ಗೊಬ್ಬರದ ಅಂಗಡಿಗಳ ವ್ಯಾಪಾರಿಗಳು ತಾಲೂಕಿನಲ್ಲಿ ಯೂರಿಯಾ ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ರೈತರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಶನಿವಾರ ಬೆಳಗ್ಗೆ ಪಟ್ಟಣದ ಖಾಸಗಿ ಅಂಗಡಿಯೊಂದರ ಮಾಲೀಕರ ಬಳಿ ರೈತರು ಯೂರಿಯಾ ಗೊಬ್ಬರ ಕೇಳಿದಾಗ ಗೊಬ್ಬರ ಖಾಲಿಯಾಗಿದೆ ಎಂದು ಮಾಲೀಕ ತಿಳಿಸಿದ್ದಾರೆ.

ಆದರೆ ಕೆಲ ರೈತರು ಅಂಗಡಿಯ ದಾಸ್ತಾನು ಕೊಣೆ ಪರಿಶೀಲಿಸಿದಾಗ ನೂರಕ್ಕೂ ಹೆಚ್ಚು ಯೂರಿಯಾ ಚೀಲಗಳು ಇರುವುದು ಕಂಡು ಬಂದಿದೆ. ಜಿಲ್ಲಾಧಿಕಾರಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಯೂರಿಯಾ ಅಭಾವವಿಲ್ಲ ಎಂದು ಹೇಳುತ್ತಾರೆ ಆದರೆ ನಿತ್ಯ ರೈತರು ಗೊಬ್ಬರಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.