ಬೆಳಗಾವಿ ನಗರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಆರ್.ಕೆ ಪಾಟೀಲ ಮಾತನಾಡಿದರು. ರಾಜು ಕುಡಸೋಮಣ್ಣವರ, ರಾಜು ಸೊಗಲ,ನಿಂಗಪ್ಪ ಪಿರೋಜಿ, ರಾಜು ಸೊಗಲ, ಶಿವಾನಂದ ತಂಬಾಕೆ ಇದ್ದರು. 
ಜಿಲ್ಲೆ

ಕಾರ್ಖಾನೆಗೆ ಎನ್‌ಒಸಿ ನೀಡದಿದ್ದರೆ ಹೋರಾಟ

ಬೆಳಗಾವಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿರುವ ಸಿದ್ಧಸಿರಿ ಸಕ್ಕರೆ ಕಾರ್ಖಾನೆ ಹಾಗೂ ಎಥೆನಾಲ್ ಘಟಕಕ್ಕೆ ಕೇಂದ್ರ ಸರ್ಕಾರ ಸರ್ಕಾರ ಅನುಮತಿ ನೀಡಿದರೂ ಪರಿಸರ ಇಲಾಖೆ ಉದ್ದೇಶಪೂರ್ವಕವಾಗಿ ತೊಂದರೆ ಮಾಡುತ್ತಿದೆ. ಇದರಿಂದಾಗಿ ರೈತರಿಗೆ ಸಮಸ್ಯೆ ಆಗುತ್ತಿದೆ ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಆರ್.ಕೆ ಪಾಟೀಲ ದೂರಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಒಡೆತನದ ಕಾರ್ಖಾನೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ದೂರಿದರು. ಮಾಲಿನ್ಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿ ನಾಲ್ಕು ತಿಂಗಳ ಹಿಂದೆಯೇ ಸಕ್ಕರೆ ಕಾರ್ಖಾನೆ ಮುಚ್ಚಿಸಿದ್ದಾರೆ. ಇದರ ವಿರುದ್ಧ ಯತ್ನಾಳ್ ಅವರು ಹೈಕೋರ್ಟ್ ಮೊರೆ ಹೋಗಿ ಕಾರ್ಖಾನೆ ಕಾರ್ಯಾಚರಣೆಗೆ ಅನುಮತಿ ಪಡೆದಿದ್ದಾರೆ. ಕೂಡಲೇ ಕಾರ್ಖಾನೆ ಆರಂಭಕ್ಕೆ ಎನ್‌ಒಸಿ ಕೊಡಬೇಕು. ಇಲ್ಲದಿದ್ದರೆ ಲಿಂಗಾಯತ ಸಂಘಟನೆಗಳಿಂದ ಪರಿಸರ ಮಾಲಿನ್ಯ ನಿಯಂತ್ರಣ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಹಕಾರಿ ಸಕ್ಕರೆ ಸಂಸ್ಥೆಗಳ ರೈತ ಘಟಕದ ರಾಜ್ಯಾಧ್ಯಕ್ಷ ರಾಜು ಕುಡಸೋಮಣ್ಣವರ ಮಾತನಾಡಿ, ನ್ಯಾಯಾಲಯ ಆದೇಶ ಮಾಡಿದರೂ ಪರಿಸರ ಇಲಾಖೆಯವರು ಸಮಸ್ಯೆ ಮಾಡುತ್ತಿರುವುದು ಸರಿ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ರಾಜು ಸೊಗಲ,ನಿಂಗಪ್ಪ ಪಿರೋಜಿ, ರಾಜು ಸೊಗಲ, ಶಿವಾನಂದ ತಂಬಾಕೆ, ಶಿವಾನಂದ ಬಡ್ಡಿಮನಿ, ಗುಂಡು ಪಾಟೀಲ ಇತರರಿದ್ದರು.