ಮೈಸೂರು: ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆಯ ಜಿಲ್ಲಾ ಘಟಕ ಸೋಮವಾರ ಅಸ್ತಿತ್ವಕ್ಕೆ ಬಂದಿತು.
ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಹೇಮಂತ್ ನಾಗರಾಜ್, ಜಿಲ್ಲೆಯಲ್ಲಿನ ಹಲವು ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿ ವರ್ಗ, ಸಿಬ್ಬಂದಿ ಸರ್ಕಾರದ ಆದೇಶ ಅಥವಾ ಸುತ್ತೋಲೆಯಂತೆ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ಸಾರ್ವಜನಿಕ ಕೆಲಸ ಕಾರ್ಯ ಸುಸೂತ್ರವಾಗಿ ನಡೆಯುತ್ತಿಲ್ಲ ಎಂದು ಹೇಳಿದರು.
ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸದ ಅಥವಾ ಲಂಚಕ್ಕೆ ಬೇಡಿಕೆ ಇರಿಸುವವರ ವಿರುದ್ಧ ಹೋರಾಟ ಮಾಡುವ ಉದ್ದೇಶದಿಂದ ಈ ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಆಡಳಿತ ಪಾರದರ್ಶಕವಾಗಿರುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ಘಟಕ ಆರಂಭಿಸಲಾಗಿದೆ. ಇದು ಇಲಾಖೆಗಳಲ್ಲಿ ಕಂಡು ಬರುವ ಆಡಳಿತ ವೈಫಲ್ಯದ ಬಗ್ಗೆ ಗಮನ ಹರಿಸಿ, ಈ ನಿಟ್ಟಿನಲ್ಲಿ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಜಿಲ್ಲಾಧ್ಯಕ್ಷ ವಿ.ಪ್ರಶಾಂತ್, ಉಪಾಧ್ಯಕ್ಷ ಸಿ.ಪ್ರಸನ್ನಕುಮಾರ್, ಪ್ರಧಾನ ಕಾರ್ಯದರ್ಶಿ ಆಂಬ್ರೋಸ್ ಜಾರ್ಜ್ ಇತರರಿದ್ದರು.