ಜಿಲ್ಲೆ

ಜಿಲ್ಲಾ ಮಟ್ಟದ ಗೌತಮ ಬುದ್ಧ ಸಹಕಾರ ಸಂಘ ಅಸ್ತಿತ್ವಕ್ಕೆ

ಮೂಡಿಗೆರೆ: ಜಿಲ್ಲಾ ಮಟ್ಟದಲ್ಲಿ ಪರಿಶಿಷ್ಟ ಜಾತಿ ಸಹಕಾರ ಸಂಘ ಸ್ಥಾಪಿಸಬೇಕೆಂಬ ಹಲವು ವರ್ಷದ ಕನಸು ಈಗ ನನಸಾಗಿದೆ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ತಿಳಿಸಿದರು.
ತಾಪಂ ದೀನದಯಾಳ್ ಉಪಾಧ್ಯಾಯ ಸಭಾ ಭವನದಲ್ಲಿ ಗೌತಮಬುದ್ಧ ಪ.ಜಾತಿ ಸಹಕಾರ ಸಂಘ ಸ್ಥಾಪಿಸಿ ಷೇರುದಾರರಿಗೆ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ವಿತರಿಸಿ ಮಾತನಾಡಿ, ಪ.ಜಾತಿ ಸಮುದಾಯದವರು ಜಿಲ್ಲೆಯ ಎಲ್ಲ ಗ್ರಾಮದಲ್ಲಿ ನೆಲೆಸಿದ್ದಾರೆ. ಜಿಲ್ಲಾಮಟ್ಟದಲ್ಲಿ ಸಂಘ ಸ್ಥಾಪಿಸಿದ್ದರಿಂದ ಪ.ಜಾತಿಯವರ ಅಭಿವೃದ್ಧಿಗೆ ಹೆಚ್ಚಿನ ಸಹಾಯವಾಗಲಿದೆ ಎಂದರು.
ಜಿಲ್ಲೆಯಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ಸಮುದಾಯದ ಪ್ರತಿ ಮನೆಗಳಿಗೂ ತೆರಳಿ ಅವರಿಂದ ಕಡ್ಡಾಯವಾಗಿ ಷೇರು ಸಂಗ್ರಹಿಸಿದಲ್ಲಿ ಈ ಸಂಸ್ಥೆ ಉತ್ತಮ ಸಹಕಾರ ಸಂಘದ ಸಾಲಿಗೆ ಸೇರಲಿದೆ. ಆ ನಿಟ್ಟಿನಲ್ಲಿ ಸಂಘದ ನಿರ್ದೇಶಕರು ವಾರ್ಷಿಕ ಇಷ್ಟು ಎಂಬಂತೆ ಷೇರು ಸಂಗ್ರಹಿಸುವಂತಾಗಬೇಕು ಹಾಗಾದರೆ ಮಾತ್ರ ಸಂಘದ ಅಭಿವೃದ್ಧಿ ಜತೆಗೆ ಸಮುದಾಯವು ಅಭಿವೃದ್ಧಿಗೊಳ್ಳಲಿದೆ ಎಂದು ತಿಳಿಸಿದರು.
ಗೌತಮ ಬುದ್ಧ ಪ.ಜಾತಿ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ.ಬಸವರಾಜ್ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಯಾರೊಬ್ಬರೂ ಅಧಿಕಾರಕ್ಕಾಗಿ ಲಾಬಿ ನಡೆಸುವ ಪ್ರಶ್ನೆ ಇಲ್ಲ. ಇಲ್ಲಿ ಸಂಘದ ಜತೆಗೆ ಸಮುದಾಯದ ಅಭಿವೃದ್ಧಿ ಮುಖ್ಯವಾಗಿದೆ. ಸಂಘದ ಪದಾಧಿಕಾರಿಗಳು ಹಾಗೂ ಷೇರುದಾರರು ತಮ್ಮ ಪ್ರಯತ್ನದ ಮೂಲಕ ಸಂಘವನ್ನು ಬಲಿಷ್ಠವಾಗಿ ರೂಪಿಸಬೇಕು. ಜಿಲ್ಲೆಯಲ್ಲಿ ನಮ್ಮ ಸಹಕಾರ ಸಂಘ ಉನ್ನತಮಟ್ಟದಲ್ಲಿ ಬೆಳೆದರೆ ಇದರಿಂದ ಪ.ಜಾತಿಯವರಿಗೆ ವ್ಯಾಪಾರ, ಕೈಗಾರಿಕೆ, ಕೃಷಿ, ಹೈನುಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಕ್ಕೆ ಬರಲು ಸಂಘ ನೆರವಾಗಲಿದೆ ಎಂದು ತಿಳಿಸಿದರು.