ಕಂಪ್ಲಿ: ಮಣ್ಣಿನ ಪರೀಕ್ಷೆಗೆ ಅನುಗುಣವಾಗಿ ಶಿಫಾರಸು ಮಾಡಿದ ಬೆಳೆ ಬೆಳೆಯಲು ನಿಗದಿತ ಪ್ರಮಾಣದಲ್ಲೇ ಕೀಟನಾಶಕ, ರಸಗೊಬ್ಬರ ನೀಡುವಲ್ಲಿ ರೈತರು ಜಾಗೃತಿ ತೋರಬೇಕು ಎಂದು ಬಳ್ಳಾರಿಯ ಕೃಷಿ ಇಲಾಖೆ ಉಪನಿರ್ದೇಶಕ ಎಸ್.ಎನ್.ಮಂಜುನಾಥ ತಿಳಿಸಿದರು.
ಇಲ್ಲಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಮಂಗಳವಾರ ರೈತರೊಂದಿಗೆ ಮಾತನಾಡಿ, ಪ್ರತಿ ಬೆಳೆಗೆ ಮಣ್ಣು ಪರೀಕ್ಷೆ ಮಾಡಿಸಲೇಬೇಕು. ರೈತರಲ್ಲಿ ಮಣ್ಣು ಪರೀಕ್ಷೆ ಜಾಗೃತಿ ಮೂಡಿಸಲು ರಾಜ್ಯದ ನಾಲ್ಕು ಕೃಷಿ ವಿವಿಗಳಲ್ಲಿ ಕಾರ್ಯಾಗಾರಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಜಿಪಿಎಸ್ ಆಧಾರಿತ 16,107ಮಣ್ಣು ಮಾದರಿ ಸಂಗ್ರಹಿಸಿದ್ದು, ಇದರಲ್ಲಿ ಶೇ.50 ಮಣ್ಣು ವಿಶ್ಲೇಷಣೆ ಪೂರ್ಣಗೊಳಿಸಲಾಗಿದೆ.
ಕಂಪ್ಲಿ ತಾಲೂಕಿನಲ್ಲಿ 1,517ಮಣ್ಣು ಮಾದರಿ ಸಂಗ್ರಹಿಸಿ ಶೇ.100 ಮಣ್ಣು ವಿಶ್ಲೇಷಣೆಗೊಳಿಸಲಾಗಿದೆ. ಪೋಷಕಾಂಶ ಕೊರತೆಗೆ ಅನುಗುಣವಾಗಿ ರೈತ ಸಂಪರ್ಕ ಕೇಂದ್ರದಲ್ಲಿ ಅಗತ್ಯ ರಸಗೊಬ್ಬರ, ಕೀಟನಾಶಕ ಲಭ್ಯವಿದೆ. ಮೂರು ಹಂಗಾಮಿನಲ್ಲಿ ಸೋಯಾಬಿನ್ ಬೆಳೆಯಬಹುದಾಗಿದ್ದು ರೈತರು ಮುಂದಾಗಬೇಕಿದೆ.
ಕಂಪ್ಲಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಬೀಜೋತ್ಪಾದನೆ ಘಟಕದ 55 ಎಕರೆಯಲ್ಲಿ ತೊಗರಿ, 16 ಎಕರೆಯಲ್ಲಿ ಸಜ್ಜೆ, ನವಣೆ, ಸಾಮೆ, ಉದುಲು ಸಿರಿಧಾನ್ಯ, 5 ಎಕರೆಯಲ್ಲಿ ಧನಶಕ್ತಿ ತಳಿಯ ಸಜ್ಜೆ ಬೆಳೆದಿದ್ದು ರಾಜ್ಯ ಮತ್ತು ರಾಷ್ಟ್ರೀಯ ಬೀಜ ನಿಗಮಗಳಿಗೆ ರವಾನಿಸಲಾಗುವುದು ಎಂದರು.