ಬೆಳಗಾವಿ: ರಾಜ್ಯದ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಕೌಶಲಭರಿತ ನಾಗರಿಕರನ್ನಾಗಿ ಮಾಡಿ ವಿಕಸಿತ ಭಾರತಕ್ಕೆ ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದ ಹಲವಾರು ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದು ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ ಎಸ್. ಹೇಳಿದರು.
ನಗರದ ವಿಟಿಯು ಸಭಾಂಗಣದಲ್ಲಿ ಶುಕ್ರವಾರ ಎಕ್ಸೆಲ್ ಕಾರ್ಪ್ ಸಾಫ್ಟವೇರ್ ಡೆವಲಪ್‌ಮೆಂಟ್ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಔದ್ಯೋಗಿಕ ರಂಗದ ಜತೆ ನೇರ ಚಿಂತನೆ ನಡೆಸಬೇಕು. ಆ ನಿಟ್ಟಿನಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಕೈಗಾರಿಕೆಗಳ ಕೇಂದ್ರ ತರುವ ಉದ್ದೇಶವು ಕೇಂದ್ರ ಉದ್ಘಾಟನೆಯೊಂದಿಗೆ ಸಾಕಾರಗೊಂಡಿದೆ ಎಂದರು.
ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ನಲ್ಲೇ ಅನೇಕ ಔದ್ಯೋಗಿಕ ಮತ್ತು ತಾಂತ್ರಿಕ ಶಿಕ್ಷಣವನ್ನು ಒಂದೇ ವೇದಿಕೆಯಲ್ಲಿ ತಂದು ಇಂಟರ್ನ್‌ಷಿಪ್ ಮತ್ತು ತರಬೇತಿ ಮೂಲಕ ಔದ್ಯೋಗಿಕ ವಲಯಕ್ಕೆ ಅವಶ್ಯವಿರುವ ಕೌಶಲ ನೀಡಲಾಗುತ್ತಿದೆ. ಅದಕ್ಕಾಗಿ ಸಿಎನ್‌ಸಿ ವರ್ಕ್‌ಶಾಪ್ ಸ್ಥಾಪಿಸಲಾಗಿದೆ. ಕೊಪ್ಪಳ ಮತ್ತು ದಾಂಡೇಲಿಯ ಕೌಶಲ ಕೇಂದ್ರಗಳಲ್ಲಿ ತರಬೇತಿ ನಡೆಯುತ್ತಿವೆ. ಮತ್ತು ಸುತ್ತಲಿನ ಇಂಜಿನಿಯರಿಂಗ್ ಕಾಲೇಜುಗಳ ಜತೆ ಒಡಂಬಡಿಕೆ ಮಾಡಿಕೊಂಡು ಇಂಟರ್ನ್‌ಷಿಪ್ ನೀಡಲಾಗುತ್ತಿದೆ. ಅದೇ ಕಾರಣಕ್ಕೆ ವಿಟಿಯು ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮದ ಜತೆಗೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ಹೇಳಿದರು.
ಎಕ್ಸೆಲ್ ಕಾರ್ಪ್ ಕಂಪನಿ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೀತ್ ಗೋಯೆಲ್ ಮಾತನಾಡಿ, ಬೆಳಗಾವಿ ಎಲ್ಲ ರೀತಿಯ ಔದ್ಯೋಗಿಕ ಹಬ್ ಆಗಿ ಬೆಳೆಯುವ ಸಾಮರ್ಥ್ಯ ಹೊಂದಿದೆ. ಇಲ್ಲಿ ಯುವ ಪ್ರತಿಭೆಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಮೂಲಸೌಕರ್ಯ, ಕೈಗಾರಿಕೆಗಳು ಮತ್ತು ಎಲ್ಲ ಕಾಲದಲ್ಲಿಯೂ ಅನುಕೂಲಕರ ವಾತಾವರಣವಿದೆ. ಎಲ್ಲ ರೀತಿ ಕೈಗಾರಿಕೆಗಳು ಬೆಳೆಯಲು ಭೌಗೋಳಿಕ ಅನುಕೂಲವೂ ಇದೆ ಎಂದು ತಿಳಿಸಿದರು. ವಿಟಿಯು ಕುಲಸಚಿವ ಪ್ರೊ.ಬಿ.ಈ.ರಂಗಸ್ವಾಮಿ, ಪ್ರೊ.ಟಿ.ಎನ್.ಶ್ರೀನಿವಾಸ ಇತರರಿದ್ದರು.