ರಾಯಚೂರು: ಯೋಜನೆಗಳ ಅನುಷ್ಠಾನಕ್ಕೆ ದತ್ತಾಂಶ ಸಂಗ್ರಹ ಮೂಲಾಧಾರವಾಗಿದ್ದು, ಯುವಜನತೆ ಸಬಲೀಕರಣಕ್ಕಾಗಿ ಸರ್ಕಾರ ರೂಪಿಸಿರುವ ಯೋಜನೆಗೆ ಅಗತ್ಯ ದತ್ತಾಂಶಗಳನ್ನು ಸಂಗ್ರಹಿಸಿ ನೀಡಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಚಾರ್ಯೆ ಡಾ.ಪುಷ್ಪಾ ತಿಳಿಸಿದರು.
ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಮೀಕ್ಷಾ ಕಾರ್ಯ ಕುರಿತು ಎನ್‌ಎಸ್‌ಎಸ್ ವಿದ್ಯಾರ್ಥಿನಿಯರಿಗಾಗಿ ಶನಿವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿನಿಯರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆಗೆ ನೀಡಲಾದ ಪ್ರಶ್ನಾವಳಿಗಳಿಗೆ ಸರಿಯಾದ ಉತ್ತಮ ಪಡೆಯಬೇಕು ಎಂದು ಹೇಳಿದರು.ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕಿ ಡಾ.ಸಿ.ಕೆ.ಜ್ಯೋತಿ ಮಾತನಾಡಿ, ಅಂಕಿ ಅಂಶಗಳ ಆಧಾರವಿಲ್ಲದೆ ಸರ್ಕಾರಗಳು ಯಾವುದೇ ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವಾಗುವುದಿಲ್ಲ. ಸ್ವಯಂ ಸೇವಕಿಯರು ಮುತುವರ್ಜಿ ಸಮೀಕ್ಷೆಯನ್ನು ನಡೆಸಬೇಕು ಎಂದರು.
ಇದನ್ನೂ ಓದಿ: ಸರ್ವರ್ ಸಮಸ್ಯೆಗೆ ಶೀಘ್ರ ಇತಿಶ್ರೀ!: ಕಾವೇರಿ-2 ತಂತ್ರಾಂಶ ಅಭಿವೃದ್ಧಿ; ಹೆಚ್ಚು ದತ್ತಾಂಶ ಸಂಗ್ರಹಕ್ಕೆ ಒತ್ತು
ಎನ್‌ಎಸ್‌ಎಸ್ ಕಾರ್ಯಾಕ್ರಮಾಧಿಕಾರಿ ಡಾ.ಸಂತೋಷಕುಮಾರ ರೇವೂರ ಮಾತನಾಡಿ, ವಿದ್ಯಾರ್ಥಿನಿಯರು ನಿಖರ ಮತ್ತು ವಾಸ್ತವಿಕ ದತ್ತಾಂಶಗಳನ್ನು ಸಂಗ್ರಹಿಸುವ ಮೂಲಕ ಕೇಂದ್ರ ಸರ್ಕಾರ ನೂತನವಾಗಿ ರೂಪಿಸಲು ನಿರ್ಧರಿಸಿರುವ ರಾಷ್ಟ್ರೀಯ ಯುವ ನೀತಿ ಪರಿಣಾಮಕಾರಿಯಾಗಿ ರೂಪಗೊಳ್ಳಲು ಸಹಕರಿಸಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕಿಯರು ಉಪಸ್ಥಿತರಿದ್ದರು.