ಕನಕಗಿರಿ ತಾಲೂಕಿನ ಅಡವಿಬಾವಿ ಚಿಕ್ಕತಾಂಡಾದಲ್ಲಿ ಕೇಬಲ್ ಕಳ್ಳತನ ಮಾಡಿ ಕಾಪರ್‌ಗಾಗಿ ಕೇಬಲ್ ಸುಟ್ಟುಹಾಕಿರುವುದು. 
ಜಿಲ್ಲೆ

ಕಾಪರ್‌ಗಾಗಿ ಬೋರ್‌ವೆಲ್ ಕೇಬಲ್ ಕಳ್ಳತನ

ರುದ್ರಪ್ಪ ವಾಲಿ

ಕನಕಗಿರಿ: ತಾಲೂಕಿನ ಅಡವಿಬಾವಿ ಹಾಗೂ ಸುತ್ತಲಿನ ಗ್ರಾಮಗಳ ಹೊಲದ ಬೋರ್‌ವೆಲ್‌ಗಳ ಕೇಬಲ್ ಮೇಲೆ ಕಳ್ಳರ ಕಣ್ಣು ಬಿದ್ದಿದ್ದು ರೈತರು ಹೈರಾಣಾಗಿದ್ದಾರೆ.

ತಾಲೂಕಿನ ಅಡವಿಬಾವಿ, ದೊಡ್ಡ ತಾಂಡಾ, ಚಿಕ್ಕತಾಂಡಾಗಳಲ್ಲಿ ಅಂತರ್ಜಲದ ಸಮಸ್ಯೆ ಕಾಡುತಿದೆ. ನೀರಿಲ್ಲದೆ ಹಲವು ದ್ರಾಕ್ಷಿ ತೋಟಗಳನ್ನು ನಾಶಪಡಿಸಲಾಗಿದೆ. ಬೆಳೆಗಳಿಗೆ ಕರಡಿಗಳು ದಾಳಿ ಮಾಡುತ್ತಿವೆ.

ಅಲ್ಲದೇ, ನೀರು ಕುಡಿಯಲು ಪೈಪ್‌ಗಳನ್ನು ಮುರಿಯುವುದು ರೈತರಿಗೆ ದೊಡ್ಡ ಸಮಸ್ಯೆಯನ್ನೇ ಉಂಟುಮಾಡುತ್ತಿವೆ. ಈ ನಡುವೆ ಕಳ್ಳರ ಕಾಟ ಆರಂಭವಾಗಿದೆ. ಹಲವು ರೈತರ ಜಮೀನಿನಲ್ಲಿ ಶೇಂಗಾ, ಮೆಕ್ಕೆಜೋಳ, ಈರುಳ್ಳಿ ಬಿತ್ತನೆ ಮಾಡಿದ್ದು, ನೀರು ಹಾಯಿಸಲು ಮುಂದಾದರೆ ಕಳ್ಳರು ಬೋರ್‌ವೆಲ್‌ಗೆ ಅಳವಡಿಸಿರುವ ನೂರಾರು ಮೀಟರ್ ಕೇಬಲ್‌ಗಳನ್ನು ಕದ್ದು, ಅದರಲ್ಲಿನ ಕಾಪರ್‌ನ್ನು ತೆಗೆದುಕೊಂಡು ಹೋಗುತ್ತಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ.

ಈಗಾಗಲೇ 10ಕ್ಕೂ ಹೆಚ್ಚು ರೈತರ ಬೋರ್‌ವೆಲ್‌ನ ಕೇಬಲ್ ಕಳ್ಳತನ ಮಾಡಿರುವ ಕಳ್ಳರು ಅದೇ ತೋಟಗಳಲ್ಲಿ ಸುಟ್ಟು ಕೇಬಲ್‌ನೊಳಗಿನ ಕಾಪರ್ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ರೈತನಿಗೆ ಏನು ಮಾಡಬೇಕು ಎನ್ನುವುದೇ ತೋಚುತ್ತಿಲ್ಲ. ಹಲವು ಬೋರ್‌ವೆಗಳಲ್ಲಿ ಕೇಬಲ್‌ಗಳನ್ನು ಬಿಟ್ಟಿದ್ದು, ಪಂಪ್‌ಗಳನ್ನು ಎತ್ತಿಯೇ ಹೊಸ ಕೇಬಲ್ ಅಳವಡಿಸಬೇಕು. ಇದಕ್ಕೆ ಸಾವಿರಾರು ರೂ. ಖರ್ಚು ಮಾಡಬೇಕು. ಆದರೆ, ಹೊಸ ಕೇಬಲ್ ಉಳಿಯುತ್ತದೆ ಎನ್ನುವ ನಂಬಿಕೆಯೂ ರೈತರಿಗಿಲ್ಲವಾಗಿದೆ.

ಪೊಲೀಸ್ ಇಲಾಖೆ ಈ ಬಗ್ಗೆ ಎಚ್ಚೆತ್ತು ಈ ಭಾಗದಲ್ಲಿ ರಾತ್ರಿ ಪಾಳೆಯಲ್ಲಿ ಪೊಲೀಸರನ್ನು ನಿಯೋಜಿಸಬೇಕು. ಅಲ್ಲದೇ, ಕಳ್ಳರನ್ನು ಹಿಡಿಯಬೇಕು ಎಂದು ರೈತರೊಬ್ಬರು ಠಾಣೆಗೆ ಮನವಿ ಸಲ್ಲಿಸಿದ್ದಾರೆ.

ಕಳೆದ 20 ದಿನಗಳಿಂದ ಕಳ್ಳರ ಕಾಟ ಹೆಚ್ಚಾಗಿದೆ. ಬೋರ್‌ವೆಲ್‌ನ ಕೇಬಲ್ ಕದ್ದು ಸುಟ್ಟುಕೊಂಡು ತಾಮ್ರ ಒಯ್ಯುತ್ತಿರುವುದು ರೈತರಿಗೆ ನಷ್ಟವಾಗುವುದರ ಜತೆಗೆ ಬೆಳೆಗಳಿಗೆ ನೀರು ಹಾಯಿಸಲು ತೊಂದರೆಯಾಗುತ್ತಿದೆ. ಕಳ್ಳರನ್ನು ಹಿಡಿಯುವಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ. ಭೀಮಣ್ಣ ಚಿಕ್ಕತಾಂಡಾ ರೈತ.
ರೈತರ ಕೇಬಲ್ ಕಳ್ಳತನ ಗಮನಕ್ಕಿರಲಿಲ್ಲ. ರೈತರು ದೂರು ಅಥವಾ ಮನವಿ ಸಲ್ಲಿಸಿದ್ದರೆ, ರೈತರ ಬೋರ್‌ವೆಲ್ ಕಳ್ಳತನ ಮಾಡುವ ಕಳ್ಳರ ಹಿಡಿಯಲು ಕ್ರಮ ತೆಗೆದುಕೊಳ್ಳಲಾಗುವುದು. ಎಂ.ಡಿ. ಫೈಜುಲ್ಲಾ ಪಿಐ ಕನಕಗಿರಿ