ಜಿಲ್ಲೆ

ವಸತಿ ನಿಲಯ ನಿರ್ಮಾಣಕ್ಕೆ ಶೀಘ್ರ ಕ್ರಮ

ಸವದತ್ತಿ: ನೌಕರರ ಬೇಡಿಕೆಯಂತೆ ನೌಕರರ ಭವನದಲ್ಲಿರುವ ಖಾಲಿ ಜಾಗದಲ್ಲಿ ಶಾಸಕರ ಅನುದಾನದಲ್ಲಿ ವಸತಿ ನಿಲಯ ನಿರ್ಮಾಣ ಹಾಗೂ ಮಾಮನಿ ಕೆರೆ ರಸ್ತೆಯ 4 ಗುಂಟೆ ಜಾಗವನ್ನು ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಅಭಿವೃದ್ಧಿಗೊಳಿಸಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಭರವಸೆ ನೀಡಿದರು.

ಇಲ್ಲಿನ ಗುರು ಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನೌಕರರ ಸಮಸ್ಯೆಗೆ ಸ್ಪಂದಿಸಿ ಪದಾಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕು. 7ನೇ ವೇತನಕ್ಕೆ 22,000 ಕೋಟಿ ರೂ. ಮೀಸಲಿಟ್ಟ ಮುಖ್ಯಮಂತ್ರಿಗಳ ಕಾರ್ಯ ಶ್ಲಾಘನೀಯ. ಎನ್‌ಪಿಎಸ್‌ದಿಂದ ಒಪಿಎಸ್ ಬೇಡಿಕೆ ಜಾರಿಯಾಗುವ ಎಲ್ಲ ಭರವಸೆ ಇದೆ. ಈ ನಿಟ್ಟಿನಲ್ಲಿ ಸಿಎಂ ಅವರಿಗೆ ಒತ್ತಾಯಿಸಲಾಗುವುದು. ಸಾರ್ವಜನಿಕರ ಸಮಸ್ಯೆ ಹಾಗೂ ಮೂಲಸೌಕರ್ಯ ಕಲ್ಪಿಸುವ ಜವಾಬ್ದಾರಿ ಇದೆ. ಎಲ್ಲ ಇಲಾಖೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಎಲ್ಲರೂ ಒಗ್ಗೂಡಿ ಉತ್ತಮ ಸಮಾಜ ನಿರ್ಮಿಸೋಣ ಎಂದರು.

ನೌಕರರ ಸಂಘದ ತಾಲೂಕಾಧ್ಯಕ್ಷ ಅಶೋಕ ಮುರಗೋಡ ಮಾತನಾಡಿ, ನೌಕರರ ಹಿತಾಸಕ್ತಿಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತೇವೆ. ಎಲ್ಲರ ಸಹಕಾರ ಅಗತ್ಯವಾಗಿದೆ. ಕ್ಷೇತ್ರದಲ್ಲಿ ಶಾಸಕರು ಅಭಿವೃದ್ಧಿ ಜತೆಗೆ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ನೌಕರರ ಖಾಲಿ ಜಾಗದಲ್ಲಿ ವಸತಿ ನಿಲಯ ಹಾಗೂ ಮಂಗಲ ಕಾರ್ಯಾಲಯ ನಿರ್ಮಿಸಬೇಕೆಂದು ಮನವಿ ಮಾಡಿದರು.

ಶಿಕ್ಷಕ ಎಂ.ಎನ್.ಕಬ್ಬೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ದಿನದರ್ಶಿಕೆಯನ್ನು ಶಾಸಕ ವಿಶ್ವಾಸ ವೈದ್ಯ ಬಿಡುಗಡೆಗೊಳಿಸಿದರು. ತಾಲೂಕು ಘಟಕದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಅಂಗನವಾಡಿ ಸಹಾಯಕಿಯರ ಮುಂಬಡ್ತಿ ಆದೇಶ ಪತ್ರ ವಿತರಿಸಲಾಯಿತು.

ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಬಿಇಒ ಮೋಹನ ದಂಡಿನ, ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚಣ್ಣವರ, ಉಪಾಧ್ಯಕ್ಷೆ ದಾವಲಬಿ ಸನದಿ, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ ಜಂಬ್ರಿ, ಡಾ.ಎಚ್.ಎಂ.ಮಲ್ಲನಗೌಡರ, ಆರೋಗ್ಯಾಧಿಕಾರಿ ಶ್ರೀಪಾದ ಸಬನೀಸ್, ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ರಾಯಗೋಳ, ಶಿವಾನಂದ ಪಟ್ಟಣಶೆಟ್ಟಿ, ಬಸವರಾಜ ಪ್ರಭುನವರ, ಚಂದ್ರು ಶ್ಯಾಮರಾಯನವರ, ವೀರೇಶ ಬ್ಯಾಹಟ್ಟಿ, ಪ್ರಾಥಮಿಕ ನೌಕರರ ಸಂಘದ ಅಧ್ಯಕ್ಷ ಕಿರಣ ಕುರಿ, ಅರಣ್ಯಾಧಿಕಾರಿ ಸಂಜೀವ ಸಂಸುದ್ದಿ ಇತರರಿದ್ದರು.