ಜಿಲ್ಲೆ

ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ - ಮಹಾದೇವಪ್ಪ ಯಾದವಾಡ

ರಾಮದುರ್ಗ: ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ತಯಾರಿಸಿ ವಿತರಿಸುವ ಜತೆಗೆ ಅವರ ಶಿಕ್ಷಣದ ಪ್ರಗತಿಯ ಬಗ್ಗೆ ನಿಲಯ ಮೇಲ್ವಿಚಾರಕರು ಮೇಲಿಂದ ಮೇಲೆ ವಿಚಾರಿಸುತ್ತಿರಬೇಕು. ಅಂದಾಗ ಮಾತ್ರ ಗ್ರಾಮೀಣ ಪ್ರದೇಶದ ಬಡ ಪ್ರತಿಭೆಗಳನ್ನು ಪ್ರೋತ್ಸಾಹಿಸಿದಂತೆ ಆಗುತ್ತದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

ಪಟ್ಟಣದ ಆಂಜನೇಯ ನಗರದಲ್ಲಿರುವ ಸಮಾಜ ಇಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾ ಗಬಾರದೆಂಬ ಉದ್ದೇಶದಿಂದ ಸರ್ಕಾರ ವಸತಿ ನಿಲಯ ಸೇರಿ ಅನೇಕ ಸೌಲಭ್ಯ ನೀಡಿ ಪ್ರತಿಭೆಗಳನ್ನು ಪ್ರೊತ್ಸಾಹಿಸುತ್ತಿದೆ. ವಿದ್ಯಾರ್ಥಿನಿಯರು ಅದರ ಸದುಪಯೋಗ ಪಡೆಯಬೇಕು ಎಂದರು.

ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸದಸ್ಯ ರೇಣಪ್ಪ ಸೋಮಗೊಂಡ ಮಾತನಾಡಿ, ಸರ್ಕಾರಿ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಪಡೆದು ಉತ್ತಮ ನಾಗರಿಕರಾಗಿ ಬಾಳಬೇಕು ಎಂದರು. ಜಿಪಂ ಸದಸ್ಯ ಮಾರುತಿ ತುಪ್ಪದ ಮಾತನಾಡಿ, ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಇನ್ನಷ್ಟು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಹಳ್ಳಿಯ ಮಕ್ಕಳಿಗೆ ಹೆಚ್ಚಿನ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಪ್ರಭಾರಿ ತಹಸೀಲ್ದಾರ್ ಶಂಕರ ಗೌಡಿ ಮಾತನಾಡಿ, ವಸತಿ ನಿಲಯ ಸ್ಥಾಪನೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಶ್ರಮಿಸಿರುವವರನ್ನು ಸ್ಮರಿಸುವ ಕೆಲಸವಾಗಬೇಕಿದೆ ಎಂದರು. ಕೃಷ್ಣ ಲಮಾಣಿ, ಬಿಜೆಪಿ ಅಧ್ಯಕ್ಷ ರಾಜೇಶ ಬೀಳಗಿ, ಎಪಿಎಂಸಿ ಸದಸ್ಯ ದ್ಯಾವಪ್ಪ ಬೆಳವಡಿ, ಪುರಸಭೆ ಸದಸ್ಯರಾದ ಶಾನೂರ ಯಾದವಾಡ, ನಾಗರಾಜ ಕಟ್ಟಿಮನಿ, ಸಂಗೀತಾ ರಾಯಬಾಗ, ತಾಪಂ ಇಒ ಮುರಳೀಧರ ದೇಶಪಾಂಡೆ, ಬಿಇಒ ಎಂ.ಆರ್.ಆಲಾಸೆ ಇತರರು ಇದ್ದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎಸ್. ಕರ್ಕಿ ಸ್ವಾಗತಿಸಿದರು. ಶಿಕ್ಷಕ ಮಾರುತಿ ಅದ್ದೂರಿ ನಿರೂಪಿಸಿದರು. ಸುನಂದಾ ವಾಲಿ ವಂದಿಸಿದರು.