ತಿಪಟೂರು: ಬ್ರಾಹ್ಮಣ ಸಮುದಾಯದವರು ಆರ್ಥಿಕವಾಗಿ ಬಡವರಾಗಿರಬಹುದು. ಆದರೆ ವಿಧ್ಯೆ ಸಂಪಾದನೆಯ ಮೂಲಕ ಗೌರವದ ಸ್ಥಾನಮಾನವನ್ನು ಪಡೆದುಕೊಂಡಿದ್ದಾರೆ. ವಿದ್ಯೆ ಬ್ರಾಹ್ಮಣರಿಗೆ ನಿಜವಾದ ಆಸ್ತಿ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಸಭೆಯ ತುಮಕೂರು ಜಿಲ್ಲಾ ಪ್ರತಿನಿಧಿ ಡಾ.ಹರೀಶ್ ಅಭಿಪ್ರಾಯಪಟ್ಟರು.
ತಾಲೂಕು ಬ್ರಾಹ್ಮಣ ಗೆಳೆಯರ ಬಳಗದಿಂದ ದಿವಂಗತ ಕೆ.ಆರ್.ವೆಂಕಟೇಶ್ ಸ್ಮರಣಾರ್ಥ ವೇದಿಕೆಯಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ರಜತ ಮಹೋತ್ಸವದಲ್ಲಿ ಮಾತನಾಡಿ, ಸರ್ವೇ ಜನ ಸುಖಿನೋ ಭವಂತು, ಸಮಸ್ತ ಸನ್ಮಾಂಗಲಾನಿ ಭವಂತು ಎಂಬ ಧ್ಯೇಯವನ್ನು ಅಳವಡಿಸಿಕೊಂಡಿರುವುದು ಬ್ರಾಹ್ಮಣ ಸಮುದಾಯದ ಶ್ರೇಷ್ಠತೆ ಎಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಸಭೆಯ ಉಪಾಧ್ಯಕ್ಷ ಸುದರ್ಶನಂ ಮಾತನಾಡಿ, ಸಮಾಜದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಸಮುದಾಯದ ಪ್ರತಿಯೊಬ್ಬರೂ ಪಡೆಯಬೇಕು. ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಉತ್ತಮ ಶಿಕ್ಷಣ ಸೌಲಭ್ಯ ಕಲ್ಪಿಸಲು ಸಭೆ ಸಹಾಯ ಮಾಡುತ್ತಿದೆ ಎಂದು ತಿಳಿಸಿದರು.
ತುಮಕೂರು ಜಿಲ್ಲಾ ಬ್ರಾಹ್ಮಣ ಸಭೆಯ ಅಧ್ಯಕ್ಷ ಎಚ್.ಎನ್.ಚಂದ್ರಶೇಖರ್ ಅವರು, ವಿಪ್ರ ಸಮಾಜವು ಜೇನಗೂಡಿನಂತೆ ಸಹಕಾರ ಸಹಬಾಳ್ವೆಯಿಂದ ಕಾರ್ಯನಿರ್ವಹಿಸಿದರೆ ತಾಲೂಕುಮಟ್ಟದಿಂದಲೇ ಬಲಿಷ್ಠ ಸಮುದಾಯ ರೂಪಿಸಬಹುದು ಎಂದು ಕರೆ ನೀಡಿದರು.
ತಿಪಟೂರಿನ ವೈದ್ಯ ಶ್ರೀಧರ ಮಾತನಾಡಿ, ಮುಂದಿನ ಪೀಳಿಗೆ ಧರ್ಮ ಉಳಿಯಬೇಕೆಂದರೆ ಹಿರಿಯರಾದ ನಾವು ಬ್ರಾಹ್ಮಣ್ಯವನ್ನು ಪಾಲಿಸಬೇಕು. ಸನಾತನ ಧರ್ಮ ಸಂಸತಿ ಉಳಿದರೆ ಮುಂದಿನ ಪೀಳಿಗೆ ಉತ್ತಮ ಜೀವನ ನಡೆಸಬಹುದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಿರುತೆರೆ ನಟ ಗಾನಗಂಧರ್ವ ಶ್ರೀ ಶಶಿಧರ ಕೋಟೆ ತಮ್ಮ ಸುಮಧುರ ಕಂಠದಿಂದ ಸಭಿಕರನ್ನು ಮನರಂಜಿಸಿದರು. ದೆಹಲಿಯಲ್ಲಿ ನಡೆದ ಸ್ವಾತಂತ್ರ$್ಯ ದಿನಾಚರಣೆಯಲ್ಲಿ ರಾಷ್ಟ$ಪತಿಗಳಿಂದ ಶೌರ್ಯ ಪ್ರಶಸ್ತಿ ಪಡೆದ ತಿಪಟೂರಿನ ಪ್ರಣವ್ ಬೆಳ್ಳೂರು, ಡಾಕ್ಟರೇಟ್ ಪದವಿ ಪಡೆದ ಮಹನೀಯರು ಹಾಗೂ ನಿಕಟ ಪೂರ್ವ ಸದಸ್ಯರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಬ್ರಾಹ್ಮಣ ಗೆಳೆಯರ ಬಳಗದ ಅಧ್ಯಕ್ಷ ಬಿ.ಎಸ್.ಮೋಹನ್, ತಾಲೂಕಿನ ವಿವಿಧ ಸಂಗಳ ಅಧ್ಯಕ್ಷರು, ಬಳಗದ ಸದಸ್ಯರು, ಸಮಾಜದ ಮುಖಂಡರು ಭಾಗವಹಿಸಿದ್ದರು.