ಜಿಲ್ಲೆ

ಉಡುಪಿ ವಕೀಲರ ಸಂಘದಿಂದ ಖಂಡನಾ ನಿರ್ಣಯ

ಮುಖ್ಯ ನ್ಯಾಯಮೂರ್ತಿ ಮೇಲೆ ಪಾದರಕ್ಷೆ ಎಸೆದ ಘಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ನ್ಯಾಯಾಲಯದಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ವಕೀಲರೊಬ್ಬರು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್​. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದಿರುವುದನ್ನು ಉಡುಪಿ ವಕೀಲರ ಸಂಘ (ರಿ.) ತೀವ್ರವಾಗಿ ಖಂಡಿಸಿದೆ.

ಸಂಘದ ಅಧ್ಯಕ್ಷ ರೆನೋಲ್ಡ್​ ಪ್ರವೀಣಕುಮಾರ್​ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿಯು ತುರ್ತು ಸಭೆ ನಡೆಸಿ, ಅ.6ರಂದು ನಡೆದ ಘಟನೆಯು ನ್ಯಾಯಾಂಗದ ಘನತೆಗೆ ಧಕ್ಕೆ ತಂದಿದೆ ಎಂದು ಖಂಡಿಸಿ, ದುಷ್ಕೃತ್ಯ ಎಸಗಿದ ಆರೋಪಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಸರ್ವಾನುಮತದಿಂದ ನಿರ್ಣಯಿಸಲಾಯಿತು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಮಿತ್ರಕುಮಾರ್​ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಜೇಶ ಎ.ಆರ್​., ಖಜಾಂಚಿ ಗಂಗಾಧರ ಎಚ್​.ಎಂ., ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ ಮೂಡುಬೆಳ್ಳೆ ಹಾಗೂ ಕಾರ್ಯಕಾರಿ ಸಮಿತಿಯ ಸಕಲ ಸದಸ್ಯರು ಪಾಲ್ಗೊಂಡಿದ್ದರು.

ಕಠಿಣ ಶಿಕ್ಷೆ ಆಗಲೇಬೇಕುಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದ ಆ ಘಟನೆಯು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಡೆದ ದಾಳಿಯಾಗಿದೆ. ಸಂವಿಧಾನ ಓದಿದ, ಪ್ರಜಾಸತ್ತೆಯನ್ನು ಎತ್ತಿ ಹಿಡಿಯಬೇಕಿದ್ದ ಹಿರಿಯ ವಕೀಲರೊಬ್ಬರು ನ್ಯಾಯಪೀಠದ ಕಡೆಗೆ ಪಾದರಕ್ಷೆ ಎಸೆದೂ ಅದನ್ನು ಸಮರ್ಥಿಸಿಕೊಳ್ಳುತ್ತಾರೆಂದರೆ ಅವರದು ಎಂತಹ ಕ್ರಿಮಿನಲ್​ ಮನಸ್ಥಿತಿ ಇರಬೇಕು? ಅರಿವಿದ್ದೂ ದುಷತ್ಯ ಎಸಗಿದ್ದಕ್ಕೆ ಕಠಿಣ ಶಿಕ್ಷೆ ಆಗಲೇಬೇಕು. ಸಂವಿಧಾನ ಗೌರವವಿಸುವ ಪ್ರತಿ ನಾಗರಿಕನೂ ಖಂಡಿಸಬೇಕು. ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.