ಬೆಂಗಳೂರು: ಪಾದಚಾರಿ ಮಾರ್ಗಗಳನ್ನು ನಡಿಗೆದಾರರ ಸ್ನೇಹಿಯಾಗಿ ರೂಪಿಸುವ ಹಿನ್ನೆಲೆಯಲ್ಲಿ ಅಭಿವೃದ್ಧಿಪಡಿಸುವ ಫುಟ್‌ಪಾತ್‌ಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲು ಚಿಂತನೆ ನಡೆಸಲಾಗಿದೆ ಎಂದು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ಸೋಮವಾರ ಕೇಂದ್ರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಇಂದಿರಾನಗರ 100 ಅಡಿ ರಸ್ತೆಯಲ್ಲಿ ವೈಟ್ ಟಾಪಿಂಗ್ ಯೋಜನೆ ಅಡಿ ಅಭಿವೃದ್ಧಿಪಡಿಸಿದ್ದು, ಪಾದಚಾರಿ ಮಾರ್ಗದುದ್ದಕ್ಕೂ ತೋಟಗಾರಿಕಾ ವಿಭಾಗದಿಂದ ಸಸಿಗಳನ್ನು ನೆಡಲಾಗಿದೆ. ಆದರೆ, ಅವುಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಎಲ್ಲೆಡೆ ಒಂದೇ ಮಾದರಿಯ ವಿನ್ಯಾಸ ಮಾಲು ಸ್ಥಳೀಯ ವಾಣಿಜ್ಯ ಉದ್ದಿಮೆಗಳ ಜತೆ ಸಭೆ ನಡೆಸಿ ಫುಟ್‌ಪಾತ್ ನಿರ್ವಹಣೆಗೆ ಒಡಂಬಡಿಕೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಸ್ಕ್ರ್ಯಾಪ್ ವಾಹನ ತೆರವಿಗೆ ಸೂಚನೆ:
ದೊಮ್ಮಲೂರು ಮೇಲ್ಸೇತುವೆ ಬಳಿಯಿರುವ ವಿದ್ಯುತ್ ಪರಿವರ್ತಕ ಕೇಂದ್ರ, ಒಣ ತ್ಯಾಜ್ಯ ಸಂಗ್ರಹಣಾ ಘಟಕ ಬಳಿ ದುರ್ವಾಸನೆ ಬರುತ್ತಿದ್ದು, ಆ ಪ್ರದೇಶದಲ್ಲಿ ಪ್ರೆಷರ್ ಪಂಪ್ ಬಳಸಿ ಸ್ವಚ್ಛಗೊಳಿಸಲು ಸೂಚಿಸಲಾಯಿತು. ಇದೇ ಸ್ಥಳದಲ್ಲಿ ಸ್ಕ್ರ್ಯಾಪ್ ವಾಹನಗಳಿದ್ದು, ಅವುಗಳನ್ನು ಕೂಡಲೆ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಕಾಮಗಾರಿ ಪೂರ್ಣಕ್ಕೆ ಶಾಸಕರ ಸೂಚನೆ:
ಆಯುಕ್ತರ ತಪಾಸಣೆ ವೇಳೆ ಶಾಂತಿನಗರ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಹಾಗೂ ಬಿಡಿಎ ಆಯುಕ್ತ ಪಿ.ಮಣಿವಣ್ಣನ್ ಅವರು ಕೆಲವೆಡೆ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಹ್ಯಾರಿಸ್, ಕೇಂಬ್ರಿಡ್ಜ್ ರಸ್ತೆಯ ಇಸ್ರೋ ಸೇತುವೆ ಬಳಿ ರಾಜಕಾಲುವೆಯ ತಡೆಗೋಡೆ ಕಾಮಗಾರಿ ಪ್ರಗತಿಯಲ್ಲಿದ್ದು, ಅದನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಜೋಗುಪಾಳ್ಯ, ಒಆರ್‌ಸಿ ರಸ್ತೆ ಹಾಗೂ ಅಕ್ಕಿತಿಮ್ಮನಹಳ್ಳಿಯಲ್ಲಿ ಸಮುದಾಯ ಭವನದ ಕಟ್ಟಡಗಳು ಅರ್ಧಕ್ಕೆ ನಿಂತಿದ್ದು, ಮರು ಟೆಂಡರ್ ಆಹ್ವಾನಿಸಿ ತ್ವರಿತಗತಿಯಲ್ಲಿ ಭವನ ನಿರ್ಮಿಸಿಕೊಡಲು ನಿರ್ದೇಶನ ನೀಡಲಾಗಿದೆ. ಆಸ್ಟಿನ್ ಟೌನ್‌ನಲ್ಲಿ ಎಲ್ಲ ಇಲಾಖೆಗಳನ್ನು ಒಳಗೊಂಡಂತೆ ‘ಶಾಂತಿನಗರ ಒನ್’ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಬೇಗನೆ ಪುನರಾರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು ಎಂದರು.