filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: NightHDR; cct_value: 0; AI_Scene: (-1, -1); aec_lux: 110.0; hist255: 0.0; hist252~255: 0.0; hist0~15: 0.0; 
ಜಿಲ್ಲೆ

ಪುರಸಭೆ ಅಧಿಕಾರಿಗಳಿಂದ ಫುಟ್‌ಪಾತ್ ತೆರವು

ಬೇಲೂರು: ಪಟ್ಟಣದಲ್ಲಿ ವಾಹನಗಳ ಸಂಚಾರಕ್ಕೆ ತೊಡಕುಂಟು ಮಾಡುತ್ತಿದ್ದ ಅಂಗಡಿ, ಮುಂಗಟ್ಟುಗಳ ಫುಟ್‌ಪಾತ್ ಮೇಲಿರಿಸಿದ್ದ ಮಾರಾಟ ವಸ್ತುಗಳನ್ನು ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ನೇತೃತ್ವದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಗುರುವಾರ ತೆರವುಗೊಳಿಸಿದರು.


ಪಟ್ಟಣದ ಚನ್ನೇಗೌಡರ ಬೀದಿಯಿಂದ ಕಾರ್ಯಾಚರಣೆ ಪ್ರಾರಂಭಿಸಿದ ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ನೇತೃತ್ವದ ತಂಡ, ಪ್ರಥಮವಾಗಿ ಫುಟ್‌ಪಾತ್ ಅಕ್ರಮಿಸಿಕೊಂಡು ಮಾರಾಟಕ್ಕಿಟ್ಟಿದ್ದ ವಸ್ತುಗಳನ್ನು ಪುರಸಭೆಯ ಟ್ರಾೃಕ್ಟರ್‌ಗೆ ತುಂಬಿಸಿದರು. ನಂತರ ಅದೇ ರಸ್ತೆಯಲ್ಲಿ ಫುಟ್‌ಪಾತ್ ಮೇಲೆ ವ್ಯಕ್ತಿಯೊಬ್ಬರು ನಿರ್ಮಿಸಿದ್ದ ಸ್ಲ್ಯಾಬ್ ಒಡೆದು ಹಾಕಲಾಯಿತು. ಇದಾದ ನಂತರದಲ್ಲಿ ಮುಖ್ಯರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ ಕೆಲ ಅಂಗಡಿ ಮುಂಗಟ್ಟುಗಳ ವಸ್ತುಗಳನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಲಾಯಿತು.


ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಬೇಲೂರು ಹೇಳಿ ಕೇಳಿ ವಿಶ್ವ ವಿಖ್ಯಾತ ಪ್ರವಾಸಿ ತಾಣ. ಇಲ್ಲಿಗೆ ದಿನನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸಿ ಶಿಲ್ಪಕಲೆ ವೀಕ್ಷಿಸುತ್ತಾರೆ. ಜತೆಗೆ ಪಟ್ಟಣದಲ್ಲಿ ಇರುವುದು ಒಂದೇ ಮುಖ್ಯರಸ್ತೆ, ಇದರಲ್ಲಿಯೇ ಸಾವಿರಾರು ವಾಹನಗಳು ಓಡಾಡಬೇಕಿದೆ. ಆದರೆ ಮುಖ್ಯರಸ್ತೆಯ ಎರಡೂ ಬದಿಯಲ್ಲೂ ವಾಹನಗಳ ನಿಲುಗಡೆ ಮಾಡುತ್ತಿರುವುದರಿಂದ ಹಾಗೂ ಫುಟ್‌ಪಾತ್ ಮೇಲೆ ಅಂಗಡಿ-ಮುಂಗಟ್ಟುಗಳ ವ್ಯಾಪಾರಿಗಳು ವ್ಯಾಪಾರದ ವಸ್ತುಗಳನ್ನು ಎಲ್ಲೆಂದರಲ್ಲಿ ಇಡುತ್ತಿವುದರಿಂದ ಪಾದಚಾರಿಗಳ ಓಡಾಟಕ್ಕೆ ಅಡ್ಡಿಯಾಗುತ್ತಿದೆ. ಫುಟ್‌ಪಾತ್ ಮೇಲೆ ವಸ್ತುಗಳನ್ನಿಡುವುದರಿಂದ ಪಾದಚಾರಿಗಳು ರಸ್ತೆ ಮೇಲೆಯೇ ಓಡಾಡುವಂತಾಗಿದೆ. ಇದರಿಂದ ಅಪಘಾತಕ್ಕೆ ಅವಕಾಶವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸಿಬ್ಬಂದಿಯೊಂದಿಗೆ ದಿಢೀರ್ ಕಾರ್ಯಾಚರಣೆ ನಡೆಸಿ ಫುಟ್‌ಪಾತ್ ತೆರವಿಗೆ ಮುಂದಾಗಿದ್ದೇವೆ. ಅಲ್ಲದೆ ಮುಂದಿನ ದಿನಗಳಲ್ಲಿ ಫುಟ್‌ಪಾತ್ ಮೇಲೆ ಮಾರಾಟದ ವಸ್ತುಗಳನ್ನಿಟ್ಟರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.


ಪುರಸಭೆ ಸದಸ್ಯರಾದ ಜಗದೀಶ್, ಪ್ರಭಾಕರ್, ಮುಖ್ಯಾಧಿಕಾರಿ ಸುಜಯ್‌ಕುಮಾರ್, ಆರೋಗ್ಯಾಧಿಕಾರಿ ಲೋಹಿತ್ ಹಾಗೂ ಸಿಬ್ಬಂದಿ ಇದ್ದರು.