ಜಿಲ್ಲೆ

ವಿದ್ಯಾರ್ಥಿಗಳಿಗೆ ಫುಟ್​ಬೋರ್ಡ್ ಪ್ರಯಾಣವೇ ಗತಿ

ಮುಂಡಗೋಡ: ಶಾಲಾ ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆಯಿಲ್ಲದ ಕಾರಣ ಬಸ್ ಬಾಗಿಲುಗಳಲ್ಲಿ ಜೋತು ಬಿದ್ದು ಹೋಗುವುದು ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿದೆ.

ಪಟ್ಟಣದ ಬಸ್ ನಿಲ್ದಾಣದಿಂದ ಲೋಯೋಲ ಶಾಲೆ, ಕಾಲೇಜು, ಹಾಗೂ ಡಿಪ್ಲೋಮಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಬೆಳಗ್ಗೆ ಹಾಗೂ ಸಂಜೆ ಬಸ್​ನ ಬಾಗಿಲಲ್ಲಿ ಜೋತು ಬಿದ್ದು ಹೋಗುವ ದೃಶ್ಯ ಸಾಮಾನ್ಯವಾಗಿದೆ.

ಶಕ್ತಿ ಯೋಜನೆ ಆರಂಭವಾದಾಗಿನಿಂದ ಎಲ್ಲ ಬಸ್​ಗಳಲ್ಲಿ ಮಹಿಳಾ ಪ್ರಯಾಣಿಕರೆ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿರುವ ಪರಿಣಾಮ ಸಾಮಾನ್ಯವಾಗಿ ಬಸ್​ಗಳು ಪ್ರಯಾಣಿಕರಿಂದ ತುಂಬಿರುತ್ತದೆ.

ಇದರಿಂದ ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಶಾಲಾ ಕಾಲೇಜುಗಳಿಗೆ ಬಸ್ ಮೂಲಕ ಸಂಚರಿಸುವ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.

ಖಾಸಗಿ ವಾಹನಗಳಲ್ಲಿ

ಡಿಪ್ಲೋಮಾ ಹಾಗೂ ಲೋಯೋಲಾ ಕಾಲೇಜ್​ನಿಂದ ಸಂಜೆ ಮನೆಗೆ ಬರುವಾಗ ಸಮಯಕ್ಕೆ ಸರಿಯಾಗಿ ಬಸ್ ಬಾರದಿರುವ ಕಾರಣ ಹಾಗೂ ಬಸ್ ಬಂದರೂ ಹತ್ತಲು ಬಸ್​ನಲ್ಲಿ ಜಾಗವಿಲ್ಲದ ಕಾರಣ ಹಲವಾರು ವಿದ್ಯಾರ್ಥಿಗಳು ಪಟ್ಟಣದತ್ತ ತೆರಳುವ ಟಾಟಾಏಸ್ ಅಥವಾ ಟ್ರ್ಯಾಕ್ಟರ್​ಗಳಲ್ಲಿ ಹತ್ತಿ ತೆರಳುವ ಅನಿವಾರ್ಯತೆ ಇದೆ.

ಶಾಲಾ-ಕಾಲೇಜುಗಳ ಮುಖ್ಯಸ್ಥರು ಈ ಕುರಿತು ಸಾರಿಗೆ ಇಲಾಖೆಯವರಿಗೆ ಪತ್ರ ಬರೆದು ಬೆಳಗ್ಗೆ ಹಾಗೂ ಸಂಜೆಯ ವೇಳೆ ವಿದ್ಯಾರ್ಥಿಗಳ ಅನುಕೂಲವಾಗುವಂತೆ ಬಸ್ ಓಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ವಿದ್ಯಾರ್ಥಿಗಳು ಬಸ್​ನ ಬಾಗಿಲುಗಳಲ್ಲಿ ಜೋತು ಬಿದ್ದು ಹೋಗುವಾಗ ಏನಾದರೂ ಅವಘಡಗಳು ಸಂಭವಿಸಿದರೆ ಯಾರೂ ಜವಾಬ್ದಾರರು ಎಂಬ ಪ್ರಶ್ನೆ ಸಾರ್ವಜನಿಕರದ್ದಾ ಗಿದೆ ಈ ಕುರಿತು ಸಾರಿಗೆ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಕಲ್ಪಿಸುವುದು ಅವಶ್ಯವಿದೆ.

ಕಾಲೇಜು ಸಮಯಕ್ಕೆ ಬರುವ ಬಸ್​ಗಳು ಪ್ರಯಾಣಿಕರಿಂದ ತುಂಬಿರುತ್ತವೆ ಇದರಿಂದ ವಿದ್ಯಾರ್ಥಿಗಳು ಬಸ್​ನಲ್ಲಿ ನಿಂತುಕೊಂಡು ಹೋಗಬೇಕು. ಅಲ್ಲದೆ ಹತ್ತಾರು ವಿದ್ಯಾರ್ಥಿಗಳು ಬಸ್ ಬಾಗಿಲಲ್ಲಿ ಜೋತು ಬಿದ್ದು ಹೋಗುವುದು ಸಾಮಾನ್ಯವಾಗಿದೆ. | ಮಂಜುನಾಥ ವಿದ್ಯಾರ್ಥಿ