ಜಿಲ್ಲೆ

ಫುಟ್ಬಾಲ್: ನಕ್ಷತ್ರ ಎಫ್.ಸಿ ರನ್ನರ್ಸ್

ಮಡಿಕೇರಿ: ಮೈಷುಗರ್ ಫ್ರೌಡಶಾಲೆಯ ಅಮೃತ ಮಹೋತ್ಸವದ ಪ್ರಯುಕ್ತ ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ಅಂಡರ್ ೧೭ ಕಾಲ್ಚೆಂಡು ಪಂದ್ಯಾವಳಿಯಲ್ಲಿ ನಕ್ಷತ್ರ ಎಫ್.ಸಿ ಕೊಡಗು ತಂಡವು ದ್ವಿತೀಯ ಸ್ಥಾನ ಪಡೆದಿದೆ.

ಜಿದ್ದಾಜಿದ್ದಿನಿಂದ ಕೂಡಿದ್ದ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಬೆಂಗಳೂರು ತಂಡದ ವಿರುದ್ಧ ನಿಗದಿತ ಸಮಯದಲ್ಲಿ ೧-೧ ಗೋಲುಗಳಿಂದ ಸಮಬಲ ಸಾಧಿಸಿತು. ಅಂತಿಮವಾಗಿ ಪೆನಾಲ್ಟಿ ಶೂಟೌಟ್‌ನಲ್ಲಿ ಕೊಡಗು ತಂಡವು ೪-೩ ಗೋಲುಗಳ ಅಂತರದಿಂದ ಸೆಮಿಫೈನಲ್ ಪಂದ್ಯ ಗೆದ್ದಿತ್ತು.

ಫೈನಲ್ ಪಂದ್ಯದಲ್ಲಿ ನಕ್ಷತ್ರ ಎಫ್.ಸಿ ಕೊಡಗು ತಂಡದ ವಿರುದ್ಧ ಡಿಯುಎಫ್‌ಎ ಹಾವೇರಿ ತಂಡವು ಗೆಲುವು ಸಾಧಿಸಿತು. ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ನಕ್ಷತ್ರ ಎಫ್.ಸಿ ಕೊಡಗು ತಂಡವು ಪೀಪಲ್ ಟ್ರೀ ಬಳ್ಳಾರಿ ತಂಡದ ವಿರುದ್ಧ ೫-೧ ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು.

ದ್ವಿತೀಯ ಪಂದ್ಯದಲ್ಲಿ ಟಿಸಿಎಫ್‌ಎ ಹುಬ್ಬಳ್ಳಿ ತಂಡದ ವಿರುದ್ಧ ೨-೨ ಗೋಲುಗಳ ಸಮಬಲ ಸಾಧಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ಸೆಮಿಫೈನಲ್ ಪ್ರವೇಶಿಸಿತು. ನಕ್ಷತ್ರ ಎಫ್.ಸಿ ಕೊಡಗು ತಂಡದ ಮುಖ್ಯ ತರಬೇತುದಾರರಾಗಿ ಎಚ್.ಹೆಚ್ ಹರೀಶ್, ವ್ಯವಸ್ಥಾಪಕರಾಗಿ ತೇಜಸ್, ಸಹ ತರಬೇತುದಾರರಾಗಿ ವೇಣು ಹಾಗೂ ಮನೋಜ್ ಕಾರ್ಯನಿರ್ವಹಿಸಿದರು.