ಸುಂಟಿಕೊಪ್ಪ:
ಕೇರಳದ ಮಲಪ್ಪುರಂನ ಅಮಿಗೋಸ್ ತಂಡ ಸುಂಟಿಕೊಪ್ಪದಲ್ಲಿ ಭಾನುವಾರ ನಡೆದ ೨೫ನೇ ವರ್ಷದ ಡಿ. ಶಿವಪ್ಪ ಸ್ಮಾರಕ ರಾಜ್ಯ ಮಟ್ಟದ ಗೋಲ್ಡ್ ಕಪ್ ಪುಟ್ಬಾಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಸುಂಟಿಕೊಪ್ಪದ ಮಿಡ್‌ಸಿಟಿ ತಂಡ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ರೋಚಕವಾಗಿ ಆರಂಭವಾದ ಪಂದ್ಯಾವಳಿಯ ಮೊದಲಾರ್ಧದ ಆರಂಭದಲ್ಲಿ ಒಂದು ಗೋಲು ಕೂಡ ದಾಖಲಾಗಿರಲಿಲ್ಲ. ಇನ್ನೇನು ಮೊದಲಾರ್ಧ ಮುಗಿಯುತ್ತಿದೆ ಎನ್ನುವಾಗ ೨೦ನೇ ನಿಮಿಷದಲ್ಲಿ ಅಮಿಗೋಸ್ ತಂಡದ ಅಮ್ದಾದ್ ಮೊದಲ ಗೋಲು ಹೊಡೆದು ಪ್ರೇಕ್ಷಕರನ್ನು ಪಂದ್ಯಾವಳಿಯಲ್ಲಿ ಹಿಡಿದಿಟ್ಟರು.
ದ್ವಿತೀಯಾರ್ದದಲ್ಲಿ ಮಿಡ್ ಸಿಟಿ ತಂಡದ ಆಟಗಾರರು ಅಕ್ರಮಣಕಾರಿ ಆಟಕ್ಕೆ ಇಳಿದು ೧೦ನೇ ನಿಮಿಷದಲ್ಲಿ ತನ್ವಿರ್ (ಚಿನ್ನು) ಹೊಡೆದ ಗೋಲು ಪಂದ್ಯವನ್ನು ಸಮಗೊಳಿಸಿತು. ಈ ಮೂಲಕ ಪಂದ್ಯ ಮತ್ತಷ್ಟು ರೋಚಕ ತಿರುವು ಪಡೆದು ಪ್ರೇಕ್ಷಕರು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತು. ಫೈನಲ್ ಪಂದ್ಯ ನಿಗದಿತ ಅವದಿಯಲ್ಲಿ ೧-೧ ಗೋಲುಗಳಲ್ಲಿ ಮುಗಿದ ಕಾರಣ ಡ್ರೈಬ್ರೇಕರ್ ಮೊರೆ ಹೋಗಲಾಯಿತು. ಟ್ರೈಬ್ರೇಕರ್‌ನಲ್ಲಿ ಏಕಸ್ವಾಮ್ಯ ಸಾಧಿಸಿದ ಮಲಪ್ಪುರಂನ ಅಮಿಗೋಸ್ ತಂಡ ೪-೧ ಗೋಲುಗಳಿಂದ ಗೆಲುವು ಸಾಧಿಸಿತು.
ಸುಂಟಿಕೊಪ್ಪ ಮಿಡ್‌ಸಿಟಿ ತಂಡದ ಪಾಂಡ್ಯನ್, ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಗೋಲ್ ಹೊಡೆದ ಆಟಗಾರ ಗೌರವಕ್ಕೆ ಪಾತ್ರರಾದರು. ಫೈನಲ್ ಪಂದ್ಯದ ಮೊದಲ ಗೋಲ್ ದಾಖಲಿಸಿದ ಮಲಪ್ಪುರಂ ಅಮಿಗೋಸ್ ತಂಡದ ಅಮ್ದಾದ್ ವಿಶೇಷ ಪ್ರಶಸ್ತಿ ಪಡೆದುಕೊಂಡರು.
ಗೆಲುವು ಸಾಧಿಸಿದ ತಂಡಕ್ಕೆ ೧ ಲಕ್ಷ ರೂ. ನಗದು ಬಹುಮಾನ ಮತ್ತು ಟ್ರೋಫಿ ಮತ್ತು ರನ್ನರ್ ಅಪ್ ತಂಡಕ್ಕೆ
೫೦ ಸಾವಿರ ರೂ. ನಗದು ಬಹುಮಾನ ಮತ್ತು ಟ್ರೋಫಿಯನ್ನು ಗಣ್ಯರು ಪ್ರದಾನ ಮಾಡಿದರು.
ತೀರ್ಪುಗಾರರಾಗಿ ಕರಣ್, ಗಿರೀಶ್ ಹಾಗೂ ಜಾನ್ಸನ್ ಕಾರ್ಯನಿರ್ವಹಿಸಿದರು.
ಈ ವೇಳೆ ಮಾತನಾಡಿದ ಪಂದ್ಯಾವಳಿ ಸಂಘಟಕ ವಿನೋದ್ ಶಿವಪ್ಪ ಸುಂಟಿಕೊಪ್ಪ ಫುಟ್‌ಬಾಲ್ ಪ್ರೇಮಿಗಳ ಸಹಕಾರದಲ್ಲಿ ಮುಂದೆಯೂ ಪಂದ್ಯಾವಳಿ ನಡೆಸಿಕೊಂಡು ಹೋಗಲಾಗುತ್ತದೆ ಎಂದರು.
ಬ್ಲೂಬಾಯ್ಸ ಯೂತ್ ಕ್ಲಬ್ ಸ್ಥಾಪಕಾಧ್ಯಕ್ಷ ಜರ್ಮಿ ಡಿಸೋಜಾ, ಹಾಲಿ ಅಧ್ಯಕ್ಷ ಆಲಿಕುಟ್ಟಿ, ಸಂಚಾಲಕ ಪ್ರಸನ್ನ, ಹಿರಿಯ ಆಟಗಾರರಾದ ಎನ್.ಎಸ್. ಕಾಳಪ್ಪ, ಸೋಮಣ್ಣ, ಪ್ಯಾಟ್ರಿಕ್, ಜಿ.ಪಂ.ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ,
ಸುಂಟಿಕೊಪ್ಪ ಪಿಡಿಒ ವೇಣುಗೋಪಾಲ್ ಅವರನ್ನು ಸನ್ಮಾನಿಸಲಾಯಿತು.
ಮೋಡ ಕವಿದ ವಾತಾವರಣ ತುಂತುರು ಮಳೆ ಹನಿ ಮಧ್ಯೆ ಆರಂಭವಾದ ಅಂತಿಮ ಪಂದ್ಯದ ಕೊನೆಯ ತನಕವೂ ಜಿಎಂಪಿ ಶಾಲಾ ಮೈದಾನ ಫುಟ್‌ಬಾಲ್ ಪ್ರೇಮಿಗಳಿಂದ ತುಂಬಿತ್ತು. ಎರಡೂ ತಂಡಗಳು ರೋಚಕವಾಗಿ ಆಡುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಎರಡೂ ತಂಡಗಳಿಗೆ ಅಭಿಮಾನಿಗಳು ಹುಟ್ಟಿಕೊಂಡರು. ಶಿಳ್ಖೆ ಹೊಡೆದು, ಚಪ್ಪಾಳೆ ಹಾಕಿ ತಮ್ಮ ಮೆಚ್ಚಿನ ಆಟಗಾರರನ್ನು ಹುರಿದುಂಬಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಗೋಲ್‌ಗಳು ಹೊಡೆದಾಗ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದ ದೃಶ್ಯವೂ ಕಂಡುಬಂತು. ಕೊಡಗಿನ ಕೋಲ್ಕತ್ತಾ ಹೆಗ್ಗಳಿಕೆಯ ಸುಂಟಿಕೊಪ್ಪದಲ್ಲಿ ಫುಟ್ಬಾಲ್ ಅಭಿಮಾನ ಕಂಡು ಮೈಸೂರು ರಾಜವಂಶಸ್ಥ ಯದುವೀರ್ ಕೂಡ ಆಶ್ಚರ್ಯಚಕಿತರಾದರು.