ಜಿಲ್ಲೆ

ಏ೧೦ ರಂದು ಅಮ್ಮತ್ತಿಯಲ್ಲಿ "ಕೊಡಗು ಫುಟ್ಬಾಲ್ ಲೀಗ್"

ಮಡಿಕೇರಿ: ಅಮ್ಮತ್ತಿಯ ಮಿಲನ್ ಫುಟ್ಬಾಲ್ ಕ್ಲಬ್ ಮತ್ತು ಕೊಡಗು ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಏ೧೦ ರಂದು ಅಮ್ಮತ್ತಿಯಲ್ಲಿ "ಕೊಡಗು ಫುಟ್ಬಾಲ್ ಲೀಗ್" ಆಯೋಜಿಸಲಾಗಿದೆ ಎಂದು ಪಂದ್ಯಾವಳಿಯ ಉಸ್ತುವಾರಿ ಎಂ.ಎಂ.ಲೀಜೇಶ್ ತಿಳಿಸಿದರು.

ಏ೧೦, ೧೧ ಹಾಗೂ ೧೭, ೧೮ ಮತ್ತು ೨೩, ೨೪, ೨೫ ರಂದು ಅಮ್ಮತ್ತಿಯ ಪ್ರೌಢಶಾಲೆ ಮೈದಾನದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ. ಏ೧೦ ರಂದು ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕೊಡಗು ಫುಟ್ಬಾಲ್ ಅಸೋಸಿಯೇಷನ್‌ನಲ್ಲಿ ನೋಂದಾಯಿತ ಕೊಡಗಿನ ೧೬ ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಏ೨೫ ರಂದು ಮಹಿಳೆಯರ ಪ್ರದರ್ಶನ ಪಂದ್ಯಾವಳಿ ನಡೆಯಲಿದ್ದು, ಸಂಜೆ ೩ ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ಸ್ ಅಧ್ಯಕ್ಷ ಎನ್.ಎ.ಹ್ಯಾರಿಸ್, ಕಾರ್ಯದರ್ಶಿ ಸತ್ಯನಾರಾಯಣ, ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ, ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಮಡಿಕೇರಿ ಶಾಸಕರು, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಫರ್‌ರ್ಮಾರ್ ಇಂಡಿಯನ್ ಫುಟ್ಬಾಲ್ ಕ್ಯಾಪ್ಟನ್ ಐ.ಎನ್.ವಿಜಯನ್ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪುಟಗಳಾದ ಕೆ.ವಿ.ದ್ಯಾನೇಶ್, ಹೆಂಡ್ರಿ, ಅಣ್ಣಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.

ಪಂದ್ಯಾವಳಿಗೆ ಮೂರು ಸಾವಿರ ಜನ ಪಾಲ್ಗೊಳ್ಳುವ ನೀರಿಕ್ಷೆ ಇದ್ದು, ವಿಜೇತ ತಂಡಕ್ಕೆ ರೂ೨೫ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ೧೫ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ೯೬೮೬೮೩೧೦೫೫, ೯೮೮೦೪೧೫೬೬೦ ಸಂಪರ್ಕಿಸಬಹುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಂದ್ಯಾವಳಿ ಮುಖ್ಯಸ್ಥ ಸಿ.ಎ.ಮುಸ್ತಫ, ಕಾರ್ಯದರ್ಶಿ ಎಂ.ಎಂ.ವಿನು, ಖಜಾಂಚಿ ಪಿ.ಪಿ.ಜಾನ್ಸನ್ ಉಪಸ್ಥಿತರಿದ್ದರು.