ಹುಬ್ಬಳ್ಳಿ: ನವರಾತ್ರಿಯ ದುರ್ಗಾಷ್ಟಮಿ ನಿಮಿತ್ತ ಇಲ್ಲಿನ ಅರವಿಂದನಗರದ ಶ್ರೀ ಹುಲಿಗೆಮ್ಮಮದೇವಿ ದೇವಸ್ಥಾನದಲ್ಲಿ ಶ್ರೀದೇವಿ ಮಹಾತ್ಮೆ ಪುರಾಣ, ಶ್ರೀ ಲಲಿತ ಸಹಸ್ರನಾಮಾವಳಿ ಸ್ತೋತ್ರ ಪಠಣ ನಂತರ ಮಂಗಳವಾರ ನವದುರ್ಗಿ ಬಾಲಕನ್ಯೆಯರಿಗೆ ಪಾದಪೂಜೆ ಮಾಡಲಾಯಿತು. ವಸ್ತ್ರ-ಉಡುಗೆಗಳನ್ನು ತೊಡಿಸಿ, ಉಡಿತುಂಬಿ ಅವರಿಂದ ಶ್ರೀ ದುರ್ಗಾಹೋಮಕ್ಕೆ ಪೂರ್ಣಾಹುತಿ ಅರ್ಪಿಸಿ, ಮುತ್ತೈದೆಯರಿಂದ ಆರತಿ ಬೆಳಗಿಸಲಾಯಿತು.
ಎಲ್ಲ ಭಕ್ತ ಸಮೂಹ ನವದುರ್ಗಿ ಬಾಲಕನ್ಯೆಯರ ಪಾದಗಳಿಗೆ ನಮಸ್ಕರಿಸಿ, ಆಶಿವಾದ ಪಡೆದರು. ಮಾತೆ ಶ್ರೀ ಹುಲಿಗೆಮ್ಮದೇವಿಗೆ ವಿವಿಧ ಹೂವುಗಳಿಂದ ಅಲಂಕರಿಸಿ, ದುರ್ಗಾಹೋಮ ಪೂಜೆ-ಕೈಂಕರ್ಯ ನೆರವೇರಿಸಲಾಯಿತು.
ಮಾತೋಶ್ರೀ ಹುಲಿಗೆಮ್ಮ ಪೋಸಾ ಅಮ್ಮನವರು ಸಾನ್ನಿಧ್ಯ ವಹಿಸಿದ್ದರು.
ಪ್ರಮುಖರಾದ ಶ್ರೀಮತಿ ಲಲಿತಾ ವಿಜಯ ಸಂಕೇಶ್ವರ, ಮಹೇಶ ದಾಬಡೆ, ತೋಟಪ್ಪ ನಿಡಗುಂದಿ, ರಾಜಶ್ರೀ ಜಡಿ, ಹೇಮಂತ ಕರ್ಜಗಿ, ರಾಜಶ್ರೀ ಬಗಲಿ, ಅನಿತಾ ಬಾಣದ, ನಾಗರಾಜ ಮಾಸಣಗಿ, ವಿಠ್ಠಲ ಏಕಬೋಟೆ, ಪರಶುರಾಮ ಸುಳ್ಳದ, ಕಾಶಪ್ಪ ಕಟ್ಟಿ, ಬಸವರಾಜ ಕಾಗೇರಿ, ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ ಇತರರು ಇದ್ದರು.