ಜಿಲ್ಲೆ

ಏ.೨೬ರಿಂದ ಕಾಲುಬಾಯಿ ರೋಗ ಲಸಿಕಾ ಅಭಿಯಾನ

ಮಡಿಕೇರಿ: ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಏ.೨೬ ರಿಂದ ೪೫ ದಿನಗಳ ಕಾಲ ೭ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ ನಡೆಯಲಿದ್ದು, ಈ ಕಾರ್ಯಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಜಾನುವಾರುಗಳ ರಕ್ಷಣೆ ಸಂಬಂಧಿಸಿದಂತೆ ಎಲ್ಲರೂ ಎಚ್ಚರವಹಿಸಬೇಕು. ಆ ನಿಟ್ಟಿನಲ್ಲಿ ಶೇಕಡಾವಾರು ಯಶಸ್ಸಿಗೆ ಶ್ರಮಿಸಬೇಕು ಎಂದ ಅವರು, ರೈತರಿಗೆ ಆರ್ಥಿಕ ಸಂಕಷ್ಟ ಉಂಟುಮಾಡುವ ಕಾಲುಬಾಯಿ ರೋಗವನ್ನು ನಿಯಂತ್ರಿಸುವಲ್ಲಿ ಎಲ್ಲರೂ ಮುಂದಾಗಬೇಕು. ಸರ್ಕಾರದ ನಿರ್ದೇಶನದಂತೆ ಜಾನುವಾರುಗಳಿಗೆ ಲಸಿಕಾ ಅಭಿಯಾನ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.

ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಲಿಂಗರಾಜ ದೊಡ್ಡಮನಿ ಮಾತನಾಡಿ, ಕಾಲುಬಾಯಿ ರೋಗವು ವೈರಾಣುನಿಂದ ಬರುವ ಅಂಟು ಜಾಡ್ಯವಾಗಿದ್ದು, ಲಸಿಕೆ ಹಾಕುವುದರಿಂದ ಕಾಲುಬಾಯಿ ರೋಗವನ್ನು ನಿಯಂತ್ರಿಸಬಹುದಾಗಿದೆ. ಕಾಲುಬಾಯಿ ರೋಗವು ಎತ್ತು, ಹೋರಿ, ಹಸು, ಎಮ್ಮೆ ಮತ್ತು ಹಂದಿಗಳಿಗೆ ತಗಲುವ ಮಾರಕ ರೋಗವಾಗಿದ್ದು, ಇದನ್ನು ತಡೆಯುವುದು ಅಭಿಯಾನದ ಉದ್ದೇಶವಾಗಿದೆ ಎಂದರು.

ವರ್ಷದಲ್ಲಿ ಕನಿಷ್ಠ ಎರಡು ಬಾರಿ ದನ ಮತ್ತು ಎಮ್ಮೆಗಳಿಗೆ ಲಸಿಕೆ ಹಾಕುವುದರಿಂದ ರೋಗ ತಡೆಗಟ್ಟಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಮೂರು ತಿಂಗಳ ಮೇಲ್ಪಟ್ಟ ಎಲ್ಲಾ ಕರುಗಳಿಗೆ ತಪ್ಪದೇ ಒಮ್ಮೆ ಲಸಿಕೆ ಹಾಕಿಸಿದ ನಂತರ ಮತ್ತೊಮ್ಮೆ ೩ ರಿಂದ ೫ ವಾರದೊಳಗೆ ಬೂಸ್ಟರ್ ಲಸಿಕೆ ಹಾಕಿಸಬೇಕಿದೆ. ಹಾಗೆಯೇ ಗರ್ಭಧರಿಸಿದ ಹಸು ಮತ್ತು ಎಮ್ಮೆಗಳಿಗೂ ತಪ್ಪದೇ ಲಸಿಕೆ ಹಾಕಿಸಬೇಕಿದೆ ಎಂದು ಕೋರಿದರು.

ಲಸಿಕೆಯು ಸಂಪೂರ್ಣವಾಗಿ ಉಚಿತವಾಗಿದ್ದು, ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಲಸಿಕಾದಾರರು ಜಾನುವಾರು ಮಾಲೀಕರ ಮನೆಗಳಿಗೆ ಬಂದಾಗ ಸಹಕಾರ ನೀಡಿ ೪ ತಿಂಗಳ ಮೇಲ್ಪಟ್ಟ ಎಲ್ಲಾ ದನ/ ಎಮ್ಮೆ ಲಸಿಕೆ ಹಾಕಿಸುವಂತೆ ಕೋರಿದರು. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಮಡಿಕೇರಿ ೯೪೪೮೬೪೭೨೭೬, ಸೋಮವಾರಪೇಟೆ ೯೯೮೦೩೬೦೨೦೦, ವಿರಾಜಪೇಟೆ ೯೯೦೧೩೦೩೯೯೬, ಕುಶಾಲನಗರ ೯೪೪೮೪೨೨೨೬೯, ಪೊನ್ನಂಪೇಟೆ ೯೭೪೦೫೫೬೩೧೧ ನ್ನು ಸಂಪರ್ಕಿಸಬಹುದು ಎಂದು ವಿವರಿಸಿದರು.

ಸಭೆಯಲ್ಲಿ ಪಾಲಿಕ್ಲಿನಿಕ್ ಉಪ ನಿರ್ದೇಶಕ ಡಾ.ತಿಮ್ಮಯ್ಯ, ನೋಡಲ್ ಅಧಿಕಾರಿ ಡಾ.ಶಿಲ್ಪ, ತಾಲೂಕು ಪಶು ವೈದ್ಯಾಧಿಕಾರಿಗಳಾದ ಡಾ.ಪ್ರಸನ್ನ, ಡಾ.ರಾಜಶೇಖರ್, ಡಾ.ಗಿರೀಶ್, ಡಾ.ನವೀನ್, ಡಾ.ಶಿಂದೆ, ಸಂಚಾರಿ ಪಶುಚಿಕಿತ್ಸಾ ಘಟಕದ ಡಾ.ಶರತ್, ಹಾಸನ ಕೆಎಂಎಫ್ ಪ್ರಧಾನ ವ್ಯವಸ್ಥಾಪಕರಾದ ಡಾ.ರೂಪೇಶ್ ಕುಮಾರ್ ಇತರರು ಇದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಭಿತ್ತಿಪತ್ರ ಬಿಡುಗಡೆ ಮಾಡಿದರು.