ಜಿಲ್ಲೆ

ಆಹಾರ ಪದಾರ್ಥಗಳ ಗುಣಮಟ್ಟ: 2,820 ಕಡೆ ತಪಾಸಣೆ

ಬೆಂಗಳೂರು: ಆಹಾರ ಪದಾರ್ಥಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ಶುಕ್ರವಾರ ಮತ್ತು ಶನಿವಾರ ರಾಜ್ಯದ 2,820 ಕಡೆ ತಪಾಸಣೆ ನಡೆಸಿ, ನಿಯಮ ಪಾಲಿಸದ ಮಳಿಗೆಗಳಿಗೆ ದಂಡ ವಿಧಿಸಿದೆ.

ತಪಾಸಣೆಗೆ ಒಳಪಟ್ಟ ಮಳಿಗೆಗಳ ಪೈಕಿ ಪರವಾನಗಿ ಅಥವಾ ನೋಂದಣಿ ಮಾಡಿಸಿಕೊಳ್ಳದ 666, ಶುಚಿತ್ವ ಕಾಯ್ದುಕೊಳ್ಳದ 1,080 ಹಾಗೂ ಆಹಾರದ ಪೊಟ್ಟಣಗಳ ಮೇಲೆ ಅದರ ಗುಣಮಟ್ಟದ ಕುರಿತ ಮಾಹಿತಿ ಹೊಂದಿರದ 24 ಮಳಿಗೆಗಳು ಸೇರಿ ಒಟ್ಟು 1,770 ಮಳಿಗೆಗಳಿಂದ 6,31,750 ದಂಡ ವಿಧಿಸಿ ನೋಟಿಸ್ ನೀಡಲಾಗಿದೆ.

ಆಹಾರ ಪದಾರ್ಥಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಇಲಾಖೆಯು ವಿಶೇಷ ಆಂದೋಲನ ಹಮ್ಮಿಕೊಂಡಿದೆ. ಇದರ ಭಾಗವಾಗಿ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿರುವ ಹೋಟೆಲ್, ರೆಸ್ಟೋರೆಂಟ್ ಹಾಗೂ ಬೀದಿ ಬದಿಯಲ್ಲಿನ ತಿನಿಸುಗಳನ್ನು ತಪಾಸಣೆ ನಡೆಸಿ, ಮಾದರಿಗಳನ್ನು ಸಂಗ್ರಹಿಸಲಾಗಿದೆ. ಸಂಗ್ರಹಿಸಿದ ಈ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.