ಜಿಲ್ಲೆ

ಕಲುಷಿತ ಆಹಾರಕ್ಕೆ ನೂರಾರು ಸಾವು: ಹಿರಿಯ ವಕೀಲ ಜಿ.ಪ್ರವೀಣ್ ಆತಂಕ

ಕೆ.ಎನ್.ರಾಘವೇಂದ್ರ

ಮಂಡ್ಯ: ಕಲುಷಿತ ಆಹಾರ ಸೇವಿಸಿ ಪ್ರತಿ ವರ್ಷ ಇನ್ನೂರಕ್ಕೂ ಹೆಚ್ಚು ಸಾಯುತ್ತಿದ್ದಾರೆ. ಅಂತೆಯೇ ಪ್ರತಿನಿತ್ಯ 16 ಲಕ್ಷ ಜನರು ಕಲುಷಿತ ಆಹಾರ ಸೇವಿಸುತ್ತಿದ್ದಾರೆ ಎಂದು ಹಿರಿಯ ವಕೀಲ ಜಿ.ಪ್ರವೀಣ್ ಆತಂಕ ವ್ಯಕ್ತಪಡಿಸಿದರು.

ನಗರದ ಪಿಇಎಸ್ ಕಾನೂನು ಕಾಲೇಜಿನಲ್ಲಿ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಪಿಇಎಸ್ ಕಾನೂನು ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಆಹಾರ ಸುರಕ್ಷತಾ ದಿನ, ವಿಶ್ವ ಬಾಲಕಾರ್ಮಿಕ ವಿರೋಧಿ ದಿನ, ವಿಶ್ವ ರಕ್ತದಾನಿಗಳ ದಿನ ಹಾಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಕಲುಷಿತ ಆಹಾರ ಸೇವಿಸಿ ನಮ್ಮ ದೇಹವನ್ನು ಹಾಳುಮಾಡಿಕೊಳ್ಳುತ್ತಿದ್ದೇವೆ. ಮಾತ್ರವಲ್ಲದೆ ಭೂಮಿ ಹಾಗೂ ಪರಿಸರವನ್ನೂ ಹಾಳುಗೆಡುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಯಸ್ಸಾದವರು, ಐದು ವರ್ಷದೊಳಗಿನ ಮಕ್ಕಳು ಕಲುಷಿತ ಆಹಾರ ಸೇವನೆ ಮಾಡುವುದರಿಂದ ಹೆಚ್ಚಿನ ಅಪಾಯದಲ್ಲಿರುತ್ತಾರೆ. ಅಸುರಕ್ಷಿತ ಆಹಾರವು ಜನರ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ವ್ಯಕ್ತಿಗಳು ಮತ್ತು ವ್ಯವಹಾರಗಳಿಗೆ ಋಣಾತ್ಮಕ ಆರ್ಥಿಕ ಪರಿಣಾಮಗಳನ್ನು ಬೀರುತ್ತದೆ. ಅಸುರಕ್ಷಿತ ಆಹಾರವು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ತೊಂದರೆಯುಂಟು ಮಾಡುತ್ತದೆ ಎಂದರು.

ಕಾನೂನು ವಿದ್ಯಾರ್ಥಿಗಳು ಕೆಳ ಮತ್ತು ಮೇಲು ಹಂತದ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸುವುದರ ಜತೆಗೆ ವಾದ ಮಂಡಿಸುವಂತಹ ಕಲೆಗಾರಿಕೆಯನ್ನು ಅರಿತುಕೊಳ್ಳಬೇಕು. ನಾನು ಇಂಜಿನಿಯರಿಂಗ್ ಪದವಿ ಪಡೆದಿದ್ದೇನೆ. ಸಾಮಾನ್ಯ ಜನರಿಗೆ ಕಾನೂನು ಸೇವೆ ಒದಗಿಸಬೇಕೆಂಬ ಉದ್ದೇಶದಿಂದ ವಕೀಲ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಆದ್ದರಿಂದ ವಿದ್ಯಾರ್ಥಿ ಹಂತದಲ್ಲಿಯೇ ಕಲಾಪಗಳನ್ನು ವೀಕ್ಷಿಸಬೇಕು. ವಾದ-ಪ್ರತಿವಾದಗಳನ್ನು ಆಲಿಸುವುದು, ನಂತರ ತಾವೂ ಅದರಲ್ಲಿ ಭಾಗಿಯಾಗುವುದು ಹೇಗೆಂಬ ಬಗ್ಗೆ ತಿಳಿಯುವುದು ಅಗತ್ಯ ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಜೆ.ಯೋಗೀಶ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಎಂ.ಪಿಪ್ರಮೋದ್‌ಕುಮಾರ್ ಇತರರಿದ್ದರು.