ಜಿಲ್ಲೆ

ವಿಷಾಹಾರ ಸೇವನೆ - ಸಮಾರಂಭಗಳತ್ತ ಆರೋಗ್ಯ ಇಲಾಖೆ ಚಿತ್ತ

* ಸುರಕ್ಷಿತ ಆಹಾರದತ್ತ ನಿಗಾ ಇಡಲು ಸೂಚನೆ

* ಹೆಚ್ಚುತ್ತಿದೆ ಆರೋಗ್ಯ ಏರುಪೇರು ಪ್ರಕರಣಗಳ

ಗಂಗಾಧರ್ ಬೈರಾಪಟ್ಟಣ ರಾಮನಗರ

ಜಿಲ್ಲೆಯಲ್ಲಿ ಆಹಾರ ಸೇವನೆ ನಂತರ ಆರೋಗ್ಯ ಏರು ಪೇರಾಗುತ್ತಿರುವ ಪ್ರಕರಣ ಹೆಚ್ಚಿದ್ದು, ಆರೋಗ್ಯ ಇಲಾಖೆ ಪ್ರಮುಖ ಸಮಾರಂಭಗಳ ಮೇಲೆ ಕಣ್ಣಿಡಲು ಮುಂದಾಗಿದೆ.

ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸುಮಾರು 125 ಮಂದಿ ಸಮಾರಂಭಗಳಲ್ಲಿ ಊಟ ಮಾಡಿದ ನಂತರ ಅಸ್ವತ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ನಂತರ ಚೇತರಿಸಿಕೊಂಡಿದ್ದಾರೆ.

ಆದರೆ, ಇಂತಹ ಪ್ರಕರಣಗಳು ಹೆಚ್ಚಿರುವ ಸಂದರ್ಭದಲ್ಲಿ ಮತ್ತಷ್ಟು ಘಟನೆಗಳು ನಡೆಯಬಹುದು ಎನ್ನುವ ಆತಂಕ ಆರೋಗ್ಯ ಇಲಾಖೆಗೆ ಇದ್ದು, ಈ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ಜತೆಗೆ ಪ್ರತಿ ಕಾರ್ಯಕ್ರಮದ ಮಾಹಿತಿ ಪಡೆದು ಸುರಕ್ಷಿತವಾಗಿ ಆಹಾರ ನೀಡಲಾಗುತ್ತಿದೆಯೇ ಎನ್ನುವ ನಿಗಾ ಇಡಲು ಮುಂದಾಗಿದೆ. ಇದಕ್ಕಾಗಿ ಆಶಾ ಕಾರ್ಯಕರ್ತೆಯರಿಗೆ ಸ್ಥಳೀಯವಾಗಿ ನಡೆಯುವ ಕಾರ್ಯಕ್ರಮಗಳ ಮಾಹಿತಿ ಹಂಚಿಕೊಳ್ಳಲು ಸೂಚನೆ ನೀಡಿದೆ.

ಕಾರಣ ತಿಳಿದು ಬಂದಿಲ್ಲ

ಚನ್ನಪಟ್ಟಣದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಊಟ ಮಾಡಿದ್ದ ಮಾಗಡಿಯ 50 ಮತ್ತು ಚನ್ನಪಟ್ಟಣದ 50 ಮಂದಿಯ ಆರೋಗ್ಯದಲ್ಲಿ ಏರು ಪೇರಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಮೇಲ್ನೋಟಕ್ಕೆ ಇಲ್ಲಿ ಐಸ್ ಕ್ರೀಂ ಸೇವಿಸಿದ್ದರಿಂದಲೇ ಆರೋಗ್ಯದ ವ್ಯತ್ಯಾಸಕ್ಕೆ ಕಾರಣ ಎಂದು ಹೇಳಲಾಗಿದೆ. ರಾಮನಗರ ಜಯಪುರ ಬಳಿ ಸೋಮವಾರ ಮಧ್ಯಾಹ್ನ ಊಟ ಮಾಡಿದ್ದ 22 ಮಂದಿ ತೀವ್ರವಾಗಿ ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಎರಡೂ ಘಟನೆಯಲ್ಲಿ ಯಾವ ಕಾರಣಕ್ಕೆ ಆಹಾರ ವಿಷವಾಗಿದೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.

ಲ್ಯಾಬ್‌ಗೆ ಮಾದರಿ 

ಚನ್ನಪಟ್ಟಣ ಮತ್ತು ರಾಮನಗರದ ಎರಡೂ ಕಡೆಗಳಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ

ಆಹಾರದ ಮಾದರಿ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಅಲ್ಲಿಂದ ವರದಿ ಬಂದ ನಂತರವಷ್ಟೇ ಘಟನೆಗೆ ನಿಖರ ಕಾರಣ ತಿಳಿದು ಬರಲಿದೆ.

ಎಚ್ಚರಿಕೆ ಅಗತ್ಯ

ಬೇಸಿಗೆ ಎಲ್ಲೆಡೆ ವ್ಯಾಪಕವಾಗಿರುವ ಕಾರಣ ಸಾಮಾನ್ಯವಾಗಿ ಆರೋಗ್ಯದಲ್ಲಿ ಏರುಪೇರು ಆಗುತ್ತಿದೆ. ಆದರೆ ಸಾಮೂಹಿಕವಾಗಿ ನಡೆಯುವ ಘಟನೆಗಳ ಹಿಂದೆ ಸಮಾರಂಭಗಳಲ್ಲಿ ಆಹಾರ ತಯಾರಿಕೆಗೆ ಬಳಸುವ ವಸ್ತುಗಳು ಹಾಗೂ ಅಡುಗೆ ಮಾಡುವ ಪಾತ್ರೆಗಳ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ. ಕಲ್ಯಾಣ ಮಂಟಪಗಳಲ್ಲಿ, ಇಲ್ಲವೇ ಶಾಮಿಯಾನಾ ಸೆಂಟರ್‌ಗಳಲ್ಲಿ ಪಡೆಯುವ ಅಡುಗೆ ಪಾತ್ರೆಗಳಲ್ಲಿ ಕಲಾಯಿ ಸರಿಯಾಗಿದೆಯೇ, ಸ್ವಚ್ಛತೆ ಮಾಡಲಾಗಿದೆಯೇ ಎನ್ನುವುದರತ್ತ ಗಮನ ಹರಿಸಬೇಕಿದೆ.

ಇಷ್ಟೇ ಅಲ್ಲದೆ, ಐಸ್ ಕ್ರೀಂ ಮತ್ತು ಕುಡಿಯುವ ನೀರು ಬಳಕೆ ಮಾಡುವ ಸಂದರ್ಭದಲ್ಲಿಯೂ ಅವುಗಳ ಬಳಕೆ ಅವಧಿಯನ್ನು ಖಾತ್ರಿ ಪಡಿಸಿಕೊಳ್ಳಬೇಕಿದೆ. ಒಂದು ವೇಳೆ ಬಳಕೆ ಅವಧಿ ಮೀರಿದ್ದರೆ ಅಂತಹ ನೀರು ಮತ್ತು ಐಸ್ ಕ್ರೀಂ ಸೇರಿ ಯಾವುದೇ ವಸ್ತುವನ್ನು ಬಳಕೆ ಮಾಡಬಾರದು ಎನ್ನುವುದು ಆರೋಗ್ಯ ಇಲಾಖೆ ಎಚ್ಚರಿಕೆ.

ಅರಿವು ಮೂಡಿಸಲು ಕ್ರಮ

ಜಿಲ್ಲೆಯಲ್ಲಿ ಎರಡು ಘಟನೆಗಳು ನಡೆದ ನಂತರ ಎಚ್ಚೆತ್ತಿರುವ ಆರೋಗ್ಯ ಇಲಾಖೆ, ಮದುವೆ ಸೇರಿ ಇತರ ಸಮಾರಂಭಗಳಲ್ಲಿ ಅಡುಗೆ ಮೇಲೆ ಕಣ್ಣಿಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಮಟ್ಟದಲ್ಲಿ ಮಾಹಿತಿ ಪಡೆಯಲು ಆಶಾ ಕಾರ್ಯಕರ್ತರಿಗೆ ಮನವಿ ಮಾಡಿದೆ. ಇಲ್ಲಿಗೆ ತೆರಳುವ ಸಿಬ್ಬಂದಿ, ಆಹಾರ ತಯಾರಿಕೆ ಎಲ್ಲ ಕ್ರಮಗಳನ್ನು ಪರಿಶೀಲನೆ ಹಾಗೂ ಪದಾರ್ಥಗಳ ಗುಣಮಟ್ಟವನ್ನು ವೀಕ್ಷಿಸಿ ಸಂಬಂಧಪಟ್ಟವರಿಗೆ ಸಲಹೆ ಸೂಚನೆ ನೀಡಲಿದೆ.

ಇದರ ಜತೆಗೆ ಸಾರ್ವಜನಿಕರು ತಮ್ಮ ಮನೆ ಸಮಾರಂಭಗಳಿಗೆ ಬರುವ ಅತಿಥಿಗಳ ಆರೋಗ್ಯದ ದೃಷ್ಟಿಯಿಂದ ಎಲ್ಲವನ್ನೂ ಪರಿಶೀಲಿಸಿಯೇ ಮುಂದುವರಿದರೆ ಅವಘಡ ಆಘಾತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ.

ಚನ್ನಪಟ್ಟಣ ಮತ್ತು ರಾಮನಗರದಲ್ಲಿ ನಡೆದ ಘಟನೆಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದವರ ಆರೋಗ್ಯ ಸುಧಾರಿಸಿದ್ದು, ಎಲ್ಲರನ್ನೂ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಸಮಾರಂಭಗಳಲ್ಲಿ ಅಡುಗೆ ಮಾಡುವಾಗ ಎಚ್ಚರವಹಿಸಿದರೆ ಇಂತಹ ಘಟನೆಗಳನ್ನು ತಪ್ಪಿಸಬಹುದು. ಡಾ.ನಿರಂಜನ್, ಡಿಎಚ್‌ಒ ರಾಮನಗರ

---

ರಾಮನಗರ ಮತ್ತು ಚನ್ನಪಟ್ಟಣದಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಆಹಾರ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇಂತಹ ಘಟನೆಗಳನ್ನು ತಪ್ಪಿಸಲು ಪ್ರತಿ ಸಮಾರಂಭದಲ್ಲಿ ನಿಗಾವಹಿಸಿ, ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ. ಡಾ.ರೋಷನಿ, ಆಹಾರ ಸುರಕ್ಷತಾ ಅಧಿಕಾರಿ, ಆರೋಗ್ಯ ಇಲಾಖೆ, ರಾಮನಗರ