ಜಿಲ್ಲೆ

4.80 ಕೋಟಿ ರೂ. ಒಡಂಬಡಿಕೆ: ಉತ್ಪಾದಕರು, ಖರೀದಿದಾರರ ನಡುವೆ ಒಪ್ಪಂದ

reportermys

ಮಂಡ್ಯ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸಮ್ಮೇಳನದಲ್ಲಿ ಉತ್ಪಾದಕರು ಮತ್ತು ಖರೀದಿದಾರರ ನಡುವೆ 4.80 ಕೋಟಿ ರೂ. ಒಡಂಬಡಿಕೆಗೆ ಸಹಿ ಮಾಡಲಾಯಿತು.
ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆ, ನಬಾರ್ಡ್, ವಿಕಸನ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಎರಡು ದಿನದ ಮಾರಾಟಗಾರರ-ಖರೀದಿದಾರರ ಸಮ್ಮೇಳನ ಹಾಗೂ ಆಹಾರ ಮೇಳದಲ್ಲಿ ಒಪ್ಪಂದ ಪತ್ರವನ್ನು ಹಸ್ತಾಂತರ ಮಾಡಲಾಯಿತು. ಒಂದು ವರ್ಷಕ್ಕೆ ಅನ್ವಯವಾಗುವಂತೆ 13 ಮಾರಾಟ ಒಪ್ಪಂದ ಮಾಡಿಕೊಳ್ಳಲಾಯಿತು. ಐದು ಖರೀದಾರರ ಸಂಸ್ಥೆಗಳು ಉತ್ಪಾದಕರೊಂದಿಗೆ ಒಡಂಬಡಿಕೆ ಮಾಡಿಕೊಂಡರು.
ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾತನಾಡಿ, ಮಂಡ್ಯ ಕೃಷಿ ಪ್ರಧಾನ ಜಿಲ್ಲೆ. ಭತ್ತ, ರಾಗಿ ಇತರ ಧಾನ್ಯಗಳಿಗೆ ಉತ್ತಮ ಮಾರುಕಟ್ಟೆ ದೊರಕಿದಲ್ಲಿ ರೈತರು ಜೀವನ ನಡೆಸಲು ಹಾಗೂ ಅವರ ಕುಟುಂಬದ ನಿರ್ವಹಣೆಗೆ ಬಹಳ ಅನುಕೂಲವಾಗುತ್ತದೆ. ಸಣ್ಣ ರೈತರಿಗೆ ಬೆಳೆ ಬೆಳೆಯಲು ಪ್ರೋತ್ಸಾಹ ಸಿಗಬೇಕಾದರೆ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ದರ ಸಿಗಬೇಕು. ಜತೆಗೆ, ಇತ್ತೀಚಿನ ದಿನಗಳಲ್ಲಿ ಅತಿವೃಷ್ಟಿ-ಅನಾವೃಷ್ಟಿಯಲ್ಲಿ ಬೆಳೆಯ ಇಳುವರಿ ಕಡಿಮೆಯಾಗಬಹುದು. ಬೆಳೆ ಹೆಚ್ಚಾದರೆ ಮಾರುಕಟ್ಟೆಯಲ್ಲಿ ದರ ಕುಸಿತವಾಗಬಹುದು. ಈ ಸಂದರ್ಭದಲ್ಲಿ ರೈತರ ಕೈ ಹಿಡಿದು ಮುನ್ನಡೆಸಬೇಕು. ಬೆಳೆಗೆ ಸರಿಯಾದ ಬೆಲೆ ಸಿಕ್ಕಿದರೆ ಅವರ ಸಮಸ್ಯೆಗಳನ್ನು ಪರಿಹರಿಸಬಹುದು. ಈ ನಿಟ್ಟಿನಲ್ಲಿ ರೈತರ ಆತ್ಮಹತ್ಯೆ ಕಡಿಮೆ ಮಾಡಬಹುದು. ಅವರ ಕುಟುಂಬ ನಿರ್ವಹಣೆಗೆ ಅಥವಾ ಮಕ್ಕಳಿಗೆ ಉತ್ತಮವಾದ ವಿದ್ಯಾಭ್ಯಾಸ ಕೊಡಿಸಲು ಒಳ್ಳೆಯ ದಾರಿಯಾಗುತ್ತದೆ ಎಂದು ಹೇಳಿದರು.
ಸರ್ಕಾರ ಮತ್ತು ಜಿಲ್ಲಾಡಳಿತ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಇದರ ಅಂಗವಾಗಿ ಇಂದು ಉತ್ಪಾದಕರು ಮಾರುಕಟ್ಟೆದಾರರ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದೇವೆ. ಅನೇಕ ತಜ್ಞರು ಭಾಗವಹಿಸಿ ರೈತರಿಗೆ ಅರಿವನ್ನು ಮೂಡಿಸುತ್ತಾರೆ ಹಾಗೂ ರೈತರು ಬೆಳೆದಂತಹ ಬೆಳೆಗೆ ಉತ್ತಮವಾದ ಮಾರುಕಟ್ಟೆ ದೊರಕಿಸಿಕೊಡಲು ಪ್ರಯತ್ನ ಪಡಬೇಕು ಎಂದರು.
ಸಮ್ಮೇಳನ ಉದ್ಘಾಟಿಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ರೈತರಿಗೆ ತಾವು ಬೆಳೆಯುವ ಬೆಳೆಗಳನ್ನು ಉತ್ತಮ ಬೆಲೆಯಲ್ಲಿ ಮಾರಾಟ ಮಾಡಲು ಅವರಿಗೆ ಮಾರುಕಟ್ಟೆ ಕುರಿತು ಹೆಚ್ಚಿನ ಮಾಹಿತಿ ನೀಡಬೇಕು. ಈ ಹಿನ್ನೆಲೆಯಲ್ಲಿ ಹೋಬಳಿ ಮಟ್ಟದಲ್ಲಿ ಕೃಷಿ ಉತ್ಪಾದಕರ ಮಾರುಕಟ್ಟೆ ಕಾರ್ಯಾಗಾರ ನಡೆಸಿ ಸಿರಿಧಾನ್ಯವನ್ನು ಉಪಯೋಗಿಸುವ ಬಗ್ಗೆ ದೊಡ್ಡ ದೊಡ್ಡ ನಗರಗಳಲ್ಲಿ ಹೆಚ್ಚಿನ ಪ್ರಚಾರವಾಗಿದೆ. ಜಿಲ್ಲೆ ಮತ್ತು ತಾಲೂಕುವಾರು ಸಿರಿಧಾನ್ಯ ಕುರಿತು ಹೆಚ್ಚಿನ ಪ್ರಚಾರ ನೀಡುವ ಅಗತ್ಯ ಇದೆ ಎಂದರು.
ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್, ಉಪನಿರ್ದೇಶಕಿ ಮಾಲತಿ, ಸಹಾಯಕ ನಿರ್ದೇಶಕಿ ಸೌಮ್ಯಶ್ರೀ, ಲೀಡ್‌ಬ್ಯಾಂಕ್ ವ್ಯವಸ್ಥಾಪಕ ದೀಪಕ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ್, ವಿಕಸನ ಸಂಸ್ಥೆಯ ನಿರ್ದೇಶಕ ಮಹೇಶ್ ಚಂದ್ರ ಗುರು ಇತರರಿದ್ದರು.