ಹುಬ್ಬಳ್ಳಿ: ಇಲ್ಲಿಯ ಇನ್ನರ್ ವ್ಹೀಲ್ ಕ್ಲಬ್ ಆಫ್ ಹುಬ್ಬಳ್ಳಿ ಬ್ಲಿಂಗ್ ಡಿ ವತಿಯಿಂದ ಫುಡ್ ಫಿಯೆಸ್ಟಾ 2024 "ಆಹಾರ ಮೇಳವನ್ನು' ಸೆ. 22ರಂದು ನಗರದ ಗೋಕುಲ ರಸ್ತೆ ಹೆಬಸೂರ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷೆ ಪಲ್ಲವಿ ಹೆಬಸೂರ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11ರಿಂದ ರಾತ್ರಿ 9ರ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ವೈವಿಧ್ಯಮಯ ಆಹಾರಗಳನ್ನು ಒಂದೇ ವೇದಿಕೆಗೆ ತರುವ ಉದ್ದೇಶ ಹೊಂದಲಾಗಿದೆ. 40ಕ್ಕೂ ಹೆಚ್ಚು ಸ್ಟಾಲ್ಗಳನ್ನು ತೆರೆಯಲಾಗಿದ್ದು, ನೂರಕ್ಕೂ ಹೆಚ್ಚು ಖಾದ್ಯಗಳು ನೋಡಲು ಸಿಗಲಿವೆ ಎಂದರು.
ಸಂಧ್ಯಾ ರಾಯ್ಕರ್ ಅವರು ವಿಶೇಷವಾಗಿ ಕೋರಿಯನ್ ಬನ್ಸ್ ತಯಾರಿಸುವ ಕುರಿತು ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಇಡೀ ದಿನ ನಡೆಯುವ ಉತ್ಸವವು ಉತ್ತೇಜನಕಾರಿಯಾಗಿರಲು ವಿವಿಧ ಮನೋರಂಜನಾ ಕಾರ್ಯಕ್ರಮ, ಗದಗನ ಸುನಿಲ ನಾಕೋಡ ಅವರಿಂದ ಸಂಗೀತ ಕಚೇರಿ ಆಯೋಜಿಸಲಾಗಿದೆ.
ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಅನುಕೂಲ ಮಾಡಿಕೊಡುವ ಉದ್ದೇಶವೂ ಇದ್ದು, ಜತೆಗೆ ಆಹಾರ ಉದ್ಯಮದಲ್ಲಿ ತೊಡಗಿರುವವರಿಗೆ ವೇದಿಕೆ ಕಲ್ಪಿಸಲಾಗುತ್ತಿದೆ. ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮೇಳಕ್ಕೆ ಭೇಟಿ ನೀಡಬೇಕೆಂದು ಕೋರಿದರು.
ಕ್ಲಬ್‌ನ ಕೇತ್ಕಿ ಕುಲಕರ್ಣಿ, ಜುಹಿ ಗೋರಿ, ಪೂಜಾ ಅಗರವಾಲ್, ನಾಜ್ ಖಾನ್ ಇತರರು ಗೋಷ್ಠಿಯಲ್ಲಿದ್ದರು.