ಜಿಲ್ಲೆ

ಮುಂದಿನ ತಿಂಗಳಿಂದ ಆಹಾರ ಪದಾರ್ಥಗಳ ಕಿಟ್

ಶಿವಮೊಗ್ಗ: ಶೀಘ್ರವೇ ಟೆಂಡರ್ ಕರೆದು ಮುಂದಿನ ತಿಂಗಳಿಂದ ಎಲ್ಲ ಗ್ರಾಹಕರಿಗೂ ಗುಣಮಟ್ಟದ ಆಹಾರ ಪದಾರ್ಥಗಳ ಕಿಟ್ ನೀಡಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಆಹಾರದ ಕಿಟ್ ವಿತರಣೆ ಬಗ್ಗೆ ಈಗಾಗಲೇ ಜನಾಭಿಪ್ರಾಯ ಸಂಗ್ರಹಿಸಿದ್ದೇವೆ. ಗ್ರಾಹಕರ ಅಪೇಕ್ಷೆಯಂತೆ ಬೇಳೆ, ಎಣ್ಣೆ, ಸಕ್ಕರೆ, ಉಪ್ಪು ಇರುವ ಕಿಟ್ ನೀಡಲು ನಿರ್ಧರಿಸಲಾಗಿದೆ. ಕಾನೂನು ಪ್ರಕಾರ ಟೆಂಡರ್ ಕರೆದು ಕಿಟ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಅಕ್ಕಿ ನೀಡುತ್ತಿದ್ದೇವೆ. ಕೇಂದ್ರದಿಂದ ಅಕ್ಕಿ ಬಾರದಿದ್ದಾಗ ಅದರ ಬದಲಿಗೆ ತಲಾ 176 ರೂ. ನೀಡಿದ್ದೇವೆ. ಇದೀಗ ಕೊಟ್ಟ ಮಾತಿನಂತೆ 5 ಕೆಜಿ ಅಕ್ಕಿ ಕೊಡುತ್ತಿದ್ದೇವೆ. ಇತ್ತೀಚೆಗೆ ಕಾಳಸಂತೆಯಲ್ಲಿ ಅಕ್ಕಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದ ತಕ್ಷಣ ಉತ್ತರ ಕರ್ನಾಟಕ ಭಾಗಕ್ಕೆ 3 ಕೆಜಿ ಅಕ್ಕಿ, ಎರಡು ಕೆಜಿ ಜೋಳ, ಇನ್ನು ಕೆಲವೆಡೆ 3 ಕೆಜಿ ಅಕ್ಕಿ, 2 ಕೆಜಿ ರಾಗಿ ಹಾಗೂ ಶಿವಮೊಗ್ಗದಲ್ಲಿ ಐದು ಕೆಜಿ ಅಕ್ಕಿ ನೀಡುತ್ತಿದ್ದೇವೆ ಎಂದರು.