ಜಿಲ್ಲೆ

ಆಹಾರ ಕಿಟ್‌ಗಳ ವಿತರಣಾ ಕಾರ್ಯಕ್ಕೆ ಸಂಸದ ಸಂಗಣ್ಣ, ಶಾಸಕ ರಾಘವೇಂದ್ರ ಹಿಟ್ನಾಳ್ ಚಾಲನೆ

ಕೊಪ್ಪಳ: ವಿವಿಧ ಕಂಪನಿಗಳಿಂದ ಸಂಗ್ರಹಿಸಿರುವ ಆಹಾರ ಕಿಟ್‌ಗಳ ವಿತರಣಾ ಕಾರ್ಯಕ್ಕೆ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಂಸದ ಸಂಗಣ್ಣ ಕರಡಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ್ ಶುಕ್ರವಾರ ಚಾಲನೆ ನೀಡಿದರು.

ಕೋವಿಡ್-19ರ ಸಂಬಂಧ ದೇಣಿಗೆ ರೂಪದಲ್ಲಿ ಸ್ವೀಕೃತವಾಗಿರುವ ಆಹಾರ ಕಿಟ್‌ಗಳನ್ನು ನಿರ್ಗತಿಕರು/ಬಡವರಿಗೆ ಪೂರೈಸುವ ಕಾರ್ಯವನ್ನು ಜಿಲ್ಲಾಡಳಿತ ಆರಂಭಿಸಿದೆ. ವಿಶೇಷ ವಾಹನದ ಮೂಲಕ ಕಿಟ್‌ಗಳ ಹಂಚಿಕೆ ನಡೆಯಲಿದೆ. ಕೊಪ್ಪಳ ನಗರಸಭೆಯಿಂದ ತಯಾರಿಸಲಾದ ‘ಮಾದರಿ ಹ್ಯಾಂಡ್‌ವಾಷ್’ ಘಟಕದಲ್ಲಿ ಸಂಸದ, ಶಾಸಕರು, ಅಧಿಕಾರಿಗಳು ಸ್ಯಾನಿಟೈಸರ್‌ದಿಂದ ಕೈ ತೊಳೆದುಕೊಂಡರು. ಇಂತಹ ಮಾದರಿ ಘಟಕಗಳನ್ನು ಪ್ರತಿಯೊಂದು ಕಚೇರಿ ಮುಂದೆ ಮಾಡುವಂತೆ ಸಂಸದ ಸಂಗಣ್ಣ ಕರಡಿ ಸೂಚಿಸಿದರು.

ಡಿಸಿ ಪಿ.ಸುನಿಲ್ ಕುಮಾರ್ ಮಾತನಾಡಿ, ಲಾಕ್‌ಡೌನ್‌ನಿಂದ ದಿನಗೂಲಿ ಆಧಾರದ ಮೇರೆಗೆ ದುಡಿಯುತ್ತಿರುವ ಕಡುಬಡವರು ಹಾಗೂ ನಿರ್ಗತಿಕರಿಗೆ ಆಹಾರದ ಕೊರತೆಯಾಗಿದೆ. ಜಿಲ್ಲಾಡಳಿತದಿಂದ ಜಿಲ್ಲೆಯ ಎಲ್ಲ ಆಶಾ ಕಾರ್ಯಕರ್ತೆಯಕರಿಗೆ, ಅಧಿಸೂಚಿತ ಸಂಸ್ಥೆಗಳ ದೇವಸ್ಥಾನದ ಅರ್ಚಕರು, ಭಾರತ ಆಹಾರ ನಿಗಮದ ಹಮಾಲರು, ಮಂಗಳ ಮುಖಿಯರು, ದೇವದಾಸಿ ಕುಟುಂಬಗಳು, ಲೈಂಗಿಕ ಕಾರ್ಯಕರ್ತೆಯರಿಗೆ ಆಹಾರ ಕಿಟ್ ನೀಡಲಾಗಿದೆ. ಉಳಿದ ಕುಟುಂಬಗಳನ್ನು ಗುರುತಿಸಿದ್ದು, ವಿವಿಧ ಕಂಪನಿಗಳು ದೇಣಿಗೆ ರೂಪದಲ್ಲಿ 6000 ಆಹಾರ ಕಿಟ್‌ಗಳನ್ನು ನೀಡಿವೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 1000 ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ 1000 ಕಿಟ್‌ಗಳನ್ನು ಹಂಚಿಕೆ ಮಾಡಲಾಗಿದೆ. ಆಯಾ ಕ್ಷೇತ್ರದ ಶಾಸಕರ ಗಮನಕ್ಕೆ ವಿಷಯ ತಂದಿದ್ದು, ಅವರ ಸಕ್ಷಮದಲ್ಲಿ ತಹಸೀಲ್ದಾರರು ಅರ್ಹ ವ್ಯಕ್ತಿಗಳಿಗೆ ಕಿಟ್ ವಿತರಿಸಬೇಕು. ವಿತರಣೆ ವೇಳೆ ನಿಯಮ ಪಾಲಿಸಬೇಕು. ಯಾವುದೇ ದೂರುಗಳಿಗೆ ಅವಕಾಶ ನೀಡದಂತೆ ಕ್ರಮವಹಿಸಿ. ಏನಾದರೂ ದೂರು ಬಂದಲ್ಲಿ ನಿಮ್ಮನ್ನೆ ಹೊಣೆಯಾಗಿಸಲಾಗುವುದೆಂದು ಎಚ್ಚರಿಸಿದರು. ಎಡಿಸಿ ಎಂ.ಪಿ.ಮಾರುತಿ, ಡಿಯುಡಿಸಿ ಪಿಡಿ ಸಿದ್ಧ್ದರಾಮೇಶ್ವರ, ಕೊಪ್ಪಳ ತಹಸೀಲ್ದಾರ್ ಜೆ.ಬಿ.ಮಜ್ಜಗಿ ಸೇರಿ ಇತರರು ಇದ್ದರು.