ಬೆಂಗಳೂರು: ಮಹಾನಗರ ವ್ಯಾಪ್ತಿಯಲ್ಲಿನ ಬೀದಿನಾಯಿಗಳಿಗೆ ಆಹಾರ ನೀಡುವ ಕುರಿತು ಕೆಲ ಮಾರ್ಗಸೂಚಿ ಇದೆಯಾದರೂ ನಿರ್ಬಂಧ ವಿಧಿಸಿಲ್ಲ ಎಂದು ಬಿಬಿಎಂಪಿ ಪಶುಪಾಲನಾ ವಿಭಾಗವು ಸ್ಪಷ್ಟನೆ ನೀಡಿದೆ.
ಬೀದಿನಾಯಿಗಳಿಗೆ ಆಹಾರ ನೀಡುವ ಬಗ್ಗೆ ಪ್ರಾಣಿ ಪ್ರಿಯರು, ಸಾರ್ವಜನಿಕರ ನಡುವೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಸಮನ್ವಯ ಸಾಧಿಸಲು ಕೆಲ ಜಾಗಗಳನ್ನು ಗುರುತಿಸಲಾಗುವುದು. ಜತೆಗೆ ಗುರುತಿಸಲಾದ ನಿರ್ದಿಷ್ಟ ಜಾಗಗಳಲ್ಲಿ ಬೀದಿನಾಯಿಗಳಿಗೆ ಆಹಾರ ನೀಡುವ ಕುರಿತು ಹಾಲಿ ಲಭ್ಯ ಮಾರ್ಗಸೂಚಿ ಫಲಕಗಳಲ್ಲಿ ನಮೂದಿಸಿ ಪ್ರದರ್ಶಿಸಲಾಗುವುದು. ಇದನ್ನು ಹೊರತುಪಡಿಸಿದರೆ ಇತರ ನಿರ್ಬಂಧಗಳನ್ನು ವಿಧಿಸಿಲ್ಲ ಎಂದು ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕ ಡಾ. ರವಿಕುಮಾರ್ ತಿಳಿಸಿದ್ದಾರೆ.