ಉಳ್ಳಾಲ: ಲಾಕ್‌ಡೌನ್‌ಬಳಿಕ ಕೇರಳದಲ್ಲಿ ಕೆಲಸವಿಲ್ಲದೆ ಕಂಗಾಲಾಗಿರುವ ರಾಜ್ಯದ ಕಾರ್ಮಿಕರು ತಲಪಾಡಿಯಲ್ಲಿದ್ದು, ಅತ್ತ ಕೇರಳಕ್ಕೂ, ಇತ್ತ ಕರ್ನಾಟಕಕ್ಕೂ ಬೇಡ ಎನ್ನುವ ಪರಿಸ್ಥಿತಿಗೆ ತಲುಪಿದ್ದಾರೆ. ಮೂರು ತಿಂಗಳಿಂದ ಕೇರಳದಲ್ಲಿ ದುಡಿಯುತ್ತಿದ್ದ ಕೊಪ್ಪಳ, ಕಲಬುರಗಿ, ಹಾವೇರಿ ಮೊದಲಾದ ಜಿಲ್ಲೆಯ 19 ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಕೇರಳದ ನೀಲೇಶ್ವರದಿಂದ ನಡೆದುಕೊಂಡು ಶುಕ್ರವಾರ ತಲಪಾಡಿ ತಲುಪಿದ್ದರು. ಆದರೆ ಗಡಿ ಭಾಗದಲ್ಲಿ ತಡೆಯಲಾಗುತ್ತಿರುವುದರಿಂದ ಅಲ್ಲೇ ಬಾಕಿಯಾಗಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಯುವಕರ ತಂಡ ಕಾರ್ಮಿಕರಿಗೆ ಆಹಾರ ವ್ಯವಸ್ಥೆ ಮಾಡುತ್ತಿದೆ. ವಾಸ್ತವ್ಯದ ಸಮಸ್ಯೆಯಿರುವುದರಿಂದ ನಮ್ಮನ್ನು ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿ ಎಂದು ಕಾರ್ಮಿಕರು ಅಂಗಲಾಚುತ್ತಿದ್ದಾರೆ. ಕಾರ್ಮಿಕರ ಸ್ಥಿತಿ ಮನಗಂಡ ತಾಲೂಕು ಪಂಚಾಯಿತಿ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ, ಮಹಮ್ಮದ್ ಕುಂಞಿ, ಹೈಸನ್ ಹುಸೈನ್, ಅಬೂಬಕ್ಕರ್ ತಲಪಾಡಿ, ಜಾಬಿ ತಲಪಾಡಿ ಅವರ ತಂಡ ಸ್ಥಳೀಯ ಪರಿಸರದಲ್ಲೇ ಆಹಾರ ತಯಾರಿಸಿ ವಿತರಿಸುತ್ತಿದ್ದಾರೆ.
ಊಟ, ನೀರಿನ ವ್ಯವಸ್ಥೆ ಇಲ್ಲದೆ ಕಾರ್ಮಿಕರು ಪರಿತಪಿಸುತ್ತಿದ್ದಾರೆ. ಎಷ್ಟು ದಿನ ಬೇಕಾದರೂ ಆಹಾರ ವ್ಯವಸ್ಥೆ ಮಾಡಲು ನಾವು ಸಿದ್ಧರಿದ್ದೇವೆ. ಆದರೆ ಕೇರಳದಿಂದ ಬಂದಿರುವುದರಿಂದ ಕರ್ನಾಟಕ ಗಡಿ ದಾಟುವಂತಿಲ್ಲ. ಪೊಲೀಸ್ ಅಧಿಕಾರಿ, ಜಿಲ್ಲಾಧಿಕಾರಿ ಬಳಿ ಮಾತುಕತೆ ನಡೆಸಲಾಗುತ್ತಿದೆ. ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ ತಾಪಂ ಸದಸ್ಯ ಪ್ರತಿದಿನ ಕೇರಳದಿಂದ ತಲಪಾಡಿಗೆ ವಲಸೆ ಕಾರ್ಮಿಕರು ಬರುತ್ತಲೇ ಇರುತ್ತಾರೆ. ಅವರಿಗೆ ತಲಪಾಡಿಯಲ್ಲಿ ಆಶ್ರಯ ಕಲ್ಪಿಸಲು ಅಸಾಧ್ಯ. ಕೇರಳದಲ್ಲಿ ಈಗಾಗಲೇ ಕೊವಿಡ್-19 ಇರುವುದರಿಂದ ಅಧಿಕಾರಿಗಳೇ ವ್ಯವಸ್ಥೆ ಮಾಡಬೇಕು. ಸುರೇಶ್ ಆಳ್ವ ಸಾಂತ್ಯಗುತ್ತು ತಲಪಾಡಿ ಗ್ರಾಪಂ ಅಧ್ಯಕ್ಷ
ಮೂಲ್ಕಿ ಗಡಿಭಾಗದಲ್ಲಿ ತಪಾಸಣೆ
ಮೂಲ್ಕಿ: ಲಾಕ್‌ಡೌನ್ ಹಿನ್ನಲೆಯಲ್ಲಿ ಮಂಗಳೂರಿನ ವಾಮಂಜೂರಿನಿಂದ ಹಾವೇರಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಎಂಟು ಕಾರ್ಮಿಕರನ್ನು ಮೂಲ್ಕಿ ಗಡಿಭಾಗದಲ್ಲಿ ಪೊಲೀಸರು ತಡೆದು ಕಟಪಾಡಿಯ ನಿರಾಶ್ರಿತರ ಶಿಬಿರಕ್ಕೆ ಸೇರಿಸಿದ್ದಾರೆ. ಮೂಲ್ಕಿ ಗಡಿ ಪ್ರದೇಶದಲ್ಲಿ ಉಭಯ ಜಿಲ್ಲೆಯ ಪೊಲೀಸರಿಂದ ತೀವ್ರ ಬಂದೋಬಸ್ತ್ ಹಾಗೂ ತಪಾಸಣೆ ಏರ್ಪಡಿಸಲಾಗಿದೆ. ಹಾಗಾಗಿ ಕಾರ್ಮಿಕರಿಗೆ ಮುಂದೆ ಹೋಗಲು ಅವಕಾಶ ನೀಡದೆ ನಿರಾಶ್ರಿತರ ಶಿಬಿರಕ್ಕೆ ಸೇರಿಸಲಾಗಿದೆ. ಮೂಲ್ಕಿ ಹೋಬಳಿಯಲ್ಲಿ ಶುಕ್ರವಾರ ಬೆಳಗ್ಗೆ 7ರಿಂದ 12ರವರೆಗೆ ತರಕಾರಿ ಅಂಗಡಿಗಳು ಹಾಗೂ ದಿನಸಿ ಅಂಗಡಿಗಳು ತೆರೆದಿದ್ದು, ಪೇಟೆಯಲ್ಲಿ ಸಾಧಾರಣ ಜನಸಂದಣಿ ಇತ್ತು. ಮೂಲ್ಕಿ, ಹಳೆಯಂಗಡಿ, ಸೊಸೈಟಿಗಳಲ್ಲಿ ಪಡಿತರ ಅಕ್ಕಿ ವಿತರಣೆ ಸರಾಗವಾಗಿ ನಡೆದಿದೆ.