ಮಾನಗಾರಿನಲ್ಲಿ ಜ್ಞಾನಭಾರತೀ ವಿದ್ಯಾಕೇಂದ್ರದ ಮಾಜಿ ಅಧ್ಯಕ್ಷ ಎಂ.ಎನ್.ಲಕ್ಷ್ಮೀನಾರಾಯಣ್ ಭಟ್ ಅವರನ್ನು ಶೃಂಗೇರಿ ಮಠದ ಆಡಳಿತಾಧಿಕಾರಿ ಡಾ. ವಿ.ಆರ್.ಗೌರೀಶಂಕರ್ ಸನ್ಮಾನಿಸಿದರು. ಶ್ರೀಧರ್ ರಾವ್, ಟಿ.ಕೆ.ಪರಾಶರ, ಜಿ.ಎಂ.ಸತೀಶ್, ಉಮೇಶ್, ಡಾ. ಲಕ್ಷ್ಮೀಪ್ರಸಾದ್, ನಾಗೇಶ್ ಕಾಮತ್ ಇದ್ದರು. 
ಜಿಲ್ಲೆ

ಅನ್ನ, ವಿದ್ಯೆ, ಔಷಧ ಮಾರಾಟದ ಸರಕಲ್ಲ

ಶೃಂಗೇರಿ: ಅನ್ನ, ವಿದ್ಯೆ, ಔಷಧ ಮಾರಾಟ ಮಾಡಬಾರದು ಎಂಬ ಪರಂಪರೆ ನಮ್ಮದು. ನಳಂದ ವಿಶ್ವವಿದ್ಯಾಲಯದಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಕರು ಮೂರು ಮೌಲ್ಯಗಳನ್ನು ಉಚಿತವಾಗಿ ನೀಡುತ್ತಿದ್ದರು. ಪ್ರಸ್ತುತ ಮಾರಾಟ ಪದ್ಧತಿ ಇದ್ದು ಪಾರಂಪರಿಕ ಮೌಲ್ಯಗಳು ವಿಕೃತವಾಗುತ್ತಿವೆ ಎಂದು ಒಡಿಶಾ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪಿ.ವಿ.ಕೃಷ್ಣ ಭಟ್ ತಿಳಿಸಿದರು.

ಮಾನಗಾರಿನ ಜ್ಞಾನಭಾರತೀ ವಿದ್ಯಾಕೇಂದ್ರ ಹಾಗೂ ವಿಶ್ವಸ್ಥಮಂಡಳಿ ಶುಕ್ರವಾರ ಆಯೋಜಿಸಿದ್ದ ವಿದ್ಯಾಕೇಂದ್ರದ ಮಾಜಿ ಅಧ್ಯಕ್ಷ ಎಂ.ಎನ್.ಲಕ್ಷ್ಮೀನಾರಾಯಣ್ ಭಟ್ ಅವರ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೆಕಾಲೆ ಶಿಕ್ಷಣ ಪದ್ಧತಿ ದೇಶವನ್ನು ಅಂಟಿಕೊಂಡಿದೆ. ಈ ವ್ಯವಸ್ಥೆ ಆತ್ಮಾಭಿಮಾನದ ಶೂನ್ಯತೆಗೆ ಕಾರಣವಾಗಿದೆ. ಶಿಕ್ಷಣ ವ್ಯಾಪಾರೀಕರಣ ಆಗಬಾರದು. ಶಿಕ್ಷಣ ವ್ಯವಸ್ಥೆಯಲ್ಲಿ ಸಂಸ್ಕಾರ, ಸಂಸ್ಕೃತಿ ಹಾಗೂ ಅಂತರಂಗದ ಸಾಮರ್ಥ್ಯ ಮಾಯವಾಗುತ್ತಿದೆ. ಪಾಲಕರು ಮಕ್ಕಳ ವ್ಯಕ್ತಿತ್ವ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಶಾಲೆಗಳಿಗೆ ಪ್ರಾಮುಖ್ಯತೆ ನೀಡಬೇಕು. ಶಿಕ್ಷಕರೂ ಮೌಲ್ಯಗಳನ್ನು ಬೆಳೆಸಿಕೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕಿದೆ. ಗುರುಕುಲ ಪದ್ಧತಿ ಪರಿಕಲ್ಪನೆ ನಮ್ಮಲ್ಲಿ ಪರಿಮೂಡಿದಾಗ ಮಾತ್ರ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪರಿವರ್ತನೆ ಸಾಧ್ಯ. ಉನ್ನತ ಶಿಕ್ಷಣ ಪಡೆದು ಸಂಸ್ಕಾರ ಇಲ್ಲದಿದ್ದರೆ ಅದರಿಂದ ದೇಶದ ಉನ್ನತಿ ಸಾಧ್ಯವಿಲ್ಲ. ನಾವು ಸೇತುವೆಯನ್ನು ಸಮರ್ಥವಾಗಿ ನಿರ್ಮಿಸಬೇಕಿದೆ. ಅದು ಕುಸಿದು ಹೋಗದಂತೆ ನೋಡುವ ಸಾಮರ್ಥ್ಯವನ್ನು ಮಕ್ಕಳಿಗೆ ಹೇಳಿಕೊಡಬೇಕಿದೆ ಎಂದರು.
ಶೃಂಗೇರಿ ಮಠದ ಆಡಳಿತಾಧಿಕಾರಿ ಡಾ. ವಿ.ಆರ್.ಗೌರೀಶಂಕರ್ ಮಾತನಾಡಿ, ನಿಸ್ವಾರ್ಥ ಸೇವೆ ಮಾಡುವರ ಸಂಖ್ಯೆ ವಿರಳವಾಗಿದೆ. ಸೇವಾಕಾರ್ಯದಲ್ಲಿ ಬದ್ಧತೆ ಇರಬೇಕು. ನಗರಗಳಲ್ಲಿ ಪಾಲಕರು ಲಕ್ಷಗಟ್ಟಲೇ ಹಣ ಸುರಿದು ಮಕ್ಕಳಿಗೆ ವಿದ್ಯೆ ಕಲಿಸುತ್ತಿದ್ದಾರೆ. ಮಕ್ಕಳಲ್ಲಿ ತಾರತಮ್ಯ ಭಾವ ಹೆಚ್ಚಿಸುವ ಶೈಕ್ಷಣಿಕ ಪದ್ಧತಿ ಸಮಾಜಕ್ಕೆ ಅಪಾಯಕಾರಿ. ಶಿಕ್ಷಣ ಸಂಸ್ಕೃತಿ, ಸಂಸ್ಕಾರವನ್ನು ಒಗ್ಗೂಡಿಸಿ ಸಮುದಾಯವನ್ನು ಕಟ್ಟಬೇಕು. ಪ್ರತಿ ಮಗುವೂ ಸಂಸ್ಕೃತಿಯ ಮೌಲ್ಯವನ್ನು ಗೌರವಿಸುವ, ಹಿರಿಯರ ಮಾತಿಗೆ ಗೌರವ ಕೊಡುವುದನ್ನು ಕಲಿಸುವ ಶಾಲೆಗಳ ಅಗತ್ಯ ಇದೆ. ಪಾಲಕರು ಮಕ್ಕಳ ಮೇಲೆ ಒತ್ತಡ ಹಾಕುವ ಬದಲು ಮಕ್ಕಳ ಸಾಮರ್ಥ್ಯ ಅರಿತು ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.
ಜ್ಞಾನಭಾರತೀ ವಿದ್ಯಾಕೇಂದ್ರದ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ್ ಅವರನ್ನು ಮಠದ ಆಡಳಿತಾಧಿಕಾರಿ ಡಾ. ವಿ.ಆರ್.ಗೌರೀಶಂಕರ್ ಸನ್ಮಾನಿಸಿದರು. ವಿದ್ಯಾಕೇಂದ್ರದ ಅಧ್ಯಕ್ಷ ಕೆ.ಶ್ರೀಕಾಂತ್, ವಿಶ್ವಸ್ಥಮಂಡಳಿ ಅಧ್ಯಕ್ಷ ಎ.ಎಸ್.ನಯನ ಇದ್ದರು.