ಜಿಲ್ಲೆ

ನಾಟಿ ಕೋಳಿ ಸಾರು-ಮುದ್ದೆ ಊಟದ ಸ್ಪರ್ಧೆ

ಬೆಂಗಳೂರು: ಕೆಂಪೇಗೌಡ ಚಾರಿಟಬಲ್ ಟ್ರಸ್ಟ್ ಭಾನುವಾರ (ಮಾ.23) ಮಧ್ಯಾಹ್ನ 12 ಗಂಟೆಗೆ ನಗರದ ನಂದಿನಿ ಬಡಾವಣೆಯ ಜೈ ಮಾರುತಿ ನಗರದ ಬಯಲು ರಂಗಮಂದಿರ ಆವರಣದಲ್ಲಿ 3ನೇ ವರ್ಷದ ನಾಟಿ ಕೋಳಿ ಸಾರು ಮತ್ತು ರಾಗಿ ಮುದ್ದೆ ಊಟದ ಸ್ಪರ್ಧೆ ಆಯೋಜಿಸಿದೆ.

ಯುಗಾದಿ ಹಬ್ಬದ ಪ್ರಯುಕ್ತ ಆಯೋಜಿಸಿರುವ ಗ್ರಾಮೀಣ ಸೊಗಡಿನ ಈ ಹೊಸತೊಡಕು ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 25 ಕೆ.ಜಿ. ತೂಕದ ಹೋತ, ದ್ವಿತೀಯ ಬಹುಮಾನ 20 ಕೆ.ಜಿ. ತೂಕದ ಟಗರು, ತೃತೀಯ ಬಹುಮಾನವಾಗಿ 5 ನಾಟಿ ಹುಂಜ ನೀಡಲಾಗುತ್ತದೆ. ಅದೇ ರೀತಿ ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನ 15 ಕೆ.ಜಿ. ತೂಕದ ಕುರಿ, ದ್ವಿತೀಯ ಬಹುಮಾನ 6 ನಾಟಿ ಕೋಳಿ, ತೃತೀಯ ಬಹುಮಾನ 3 ನಾಟಿ ಕೋಳಿ ವಿತರಿಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ದೀಕ್ಷಿತ್ ರವಿ ತಿಳಿಸಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಪುರುಷರಿಗೆ 150 ರೂ. ಹಾಗೂ ಮಹಿಳೆಯರಿಗೆ 100 ರೂ. ಪ್ರವೇಶ ಶುಲ್ಕವಿದ್ದು, ಸುತ್ತಮುತ್ತಲಿನ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ಪರ್ಧೆಯನ್ನು ಯಶಸ್ವಿಗೊಳಿಸುವಂತೆ ಹಾಗೂ ವಿವರಗಳಿಗೆ: ಮೊ: 9900150608 ಸಂಪರ್ಕಿಸುವಂತೆ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಕಿರಣ್‌ಕುಮಾರ್ ಮತ್ತು ಖಜಾಂಚಿ ವಿ.ಗೀರಿಶ್ ಕೋರಿದ್ದಾರೆ.