ಜಿಲ್ಲೆ

ಮಾನದಂಡ ಉಲ್ಲಂಘನೆ ಹಿನ್ನೆಲೆ: ಅನರ್ಹ ಪಡಿತರ ಫಲಾನುಭವಿಗಳಿಗೆ ಆಹಾರ ಇಲಾಖೆ ನೋಟಿಸ್

ಬೆಂಗಳೂರು: ಸರ್ಕಾರದ ಮಾನದಂಡ ಉಲ್ಲಂಘಿಸಿ ಪಡೆದಿರುವ ಅನರ್ಹ ಬಿಪಿಎಲ್ ಕಾರ್ಡ್‌ಗಳಿಗೆ ಆಹಾರ ಇಲಾಖೆ, ಕಾರಣ ಕೇಳಿ ನೋಟಿಸ್ ಕೊಟ್ಟಿದ್ದು, 3 ದಿನದೊಳಗೆ ಅಗತ್ಯ ದಾಖಲೆಗಳೊಂದಿಗೆ ಲಿಖಿತ ಸಮಜಾಯಿಷಿ ನೀಡಬೇಕು. ಇಲ್ಲವಾದಲ್ಲಿ ಕಾನೂನಿನ ಕ್ರಮದ ಜೊತೆಗೆ ದುರುಪಯೋಗ ಪಡಿಸಿಕೊಂಡಿದ್ದ ಪಡಿತರ ಬಾಬ್ತಿನ ಪ್ರಮಾಣವನ್ನು ಮುಕ್ತ ಮಾರುಕಟ್ಟೆ ದರದಲ್ಲಿ ಲೆಕ್ಕಹಾಕಿ ವಸೂಲಿ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದೆ.

ಕೇಂದ್ರ ಸರ್ಕಾರದಿಂದ ಹಂಚಿಕೊಂಡಿರುವ ಶಂಕಿತ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಇಲಾಖೆ ಕ್ರಮವಹಿಸಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ವಯ ಬಿಪಿಎಲ್ ಹೊಂದಿರುವ ಫಲಾನುಭವಿಗಳನ್ನು ಗುರುತಿಸಲು ಸರ್ಕಾರ ಮಾನದಂಡ ನಿಗದಿಪಡಿಸಿದೆ. ಅದರಂತೆ, ವಿವಿಧ ಇಲಾಖೆಗಳ ದತ್ತಾಂಶಗಳನ್ನು ಪರಿಶೀಲಿಸಿದ್ದು, ಮಾನದಂಡಗಳಿಗೆ ವಿರುದ್ಧವಾಗಿರುವ ಶಂಕಿತ ಪಡಿತರ ಚೀಟಿಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ನೋಟಿಸ್‌ನಲ್ಲಿ ಇಲಾಖೆ ಉಲ್ಲೇಖಿಸಿದೆ.

ವಾರ್ಷಿಕ 1.20 ಲಕ್ಷ ರೂ.ಅಧಿಕ ವರಮಾನ ಇರುವವರು, ಏಳೂವರೆ ಎಕರೆ ಒಣ ಅಥವಾ ನೀರಾವರಿ ಭೂಮಿ ಹೊಂದಿರುವವರು, ಆದಾಯ ತೆರಿಗೆ ಪಾವತಿಸುವ ಸದಸ್ಯರ ಒಳಗೊಂಡ ಕುಟುಂಬಗಳು, ಸರ್ಕಾರಿ ಸ್ವಾಮ್ಯದ ಉದ್ಯಮ, ಮಂಡಳಿ, ಸಹಕಾರ ಸಂಘ, ನಿಗಮಗಳ ಖಾಯಂ ನೌಕರರು, ವೈದ್ಯರು, ಆಸ್ಪತ್ರೆಗಳ ನೌಕರರು, ವಕೀಲರು, ಲೆಕ್ಕ ಪರಿಶೋಧಕರು, ಅನುದಾನಿತ/ ಅನುದಾನರಹಿತ ಶಾಲಾ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿರುವವರು,ಬಹುರಾಷ್ಟ್ರೀಯ ಕಂಪನಿ, ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಬಿಪಿಎಲ್ ಪಡೆಯುವಂತಿಲ್ಲ. ಆದರೆ, ಈ ಹಿಂದೆ ಸುಳ್ಳು ದಾಖಲೆಗಳನ್ನು ಕೊಟ್ಟು ಲಕ್ಷಾಂತರ ಮಂದಿ ಪಡಿತರ ಚೀಟಿಗಳನ್ನು ಪಡೆದಿದ್ದರು. ಕರ್ನಾಟಕ ಪಡಿತರ ಚೀಟಿ ಅನಧಿಕೃತ ಸ್ವಾಧೀನ ತಡೆಗಟ್ಟುವಿಕೆ-1977 ಮತ್ತು ಕರ್ನಾಟಕ ಅಗತ್ಯ ಸರಕುಗಳ ಸಾರ್ವಜನಿಕಾ ವಿತರಣಾ ವ್ಯವಸ್ಥೆ ಆದೇಶ ಅನ್ವಯ ಇಲಾಖೆ, ಅನರ್ಹ ಫಲಾನುಭವಿಗಳಿಗೆ ಕ್ರಿಮಿನಲ್ ಕೇಸ್ ದಾಖಲಿಸುವ ಬಗ್ಗೆ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಈ ನೋಟಿಸ್ ತಲುಪಿದ ಕಾರ್ಡ್‌ದಾರರು, ನೋಟಿಸ್‌ನಲ್ಲಿ ಪಡಿತರ ಚೀಟಿ ಸಂಖ್ಯೆ, ಲಾನುಭವಿ ಹೆಸರು ಮಾಹಿತಿ ನಮೂದಿಸಿ ಸಂಬಂಧಿಸಿ ಇಲಾಖೆ ಕಚೇರಿಗಳಿಗೆ ತೆರಳಬೇಕು.

ಆಹಾರ ಇಲಾಖೆ ಹೇಳೋದೇನು?

ಅನರ್ಹ ಕಾರ್ಡ್‌ಗಳಿಗೆ ಕಾರಣ ಕೇಳಿ ನೋಟಿಸ್ ಕೊಡಲಾಗುತ್ತಿದೆ. ನೋಟಿಸ್ ತಲುಪಿದ 3 ದಿನದೊಳಗೆ ಅಗತ್ಯ ದಾಖಲೆಗಳೊಂದಿಗೆ ಮಾಹಿತಿ ನೀಡಬೇಕು. ಸಾಕಷ್ಟು ಕಾರ್ಡ್‌ದಾರರು ಕಚೇರಿಗೆ ಆಗಮಿಸಿ ಈಗಾಗಲೇ ಮಾಹಿತಿ ನೀಡುತ್ತಿದ್ದಾರೆ. ಕೆಲವರು ಒಂದೊಂದು ಮಾಹಿತಿ ನೀಡುತ್ತಿದ್ದು, ಅವುಗಳನ್ನು ನಮೂದಿಸಿ ‘ಶಂಕಾಸ್ಪದ ವರ್ಗ’ಕ್ಕೆ ಇವುಗಳನ್ನು ಗುರುತಿಸಿ ಪಟ್ಟಿ ಮಾಡಲಾಗುತ್ತಿದೆ. ನೋಟಿಸ್‌ಗೆ ಹೆದರುವ ಅಗತ್ಯವಿಲ್ಲ. ಕ್ರಮಿನಲ್ ಕೇಸ್ ದಾಖಲಿಸುವುದಿಲ್ಲ. 25 ಲಕ್ಷ ರೂ.ವಹಿವಾಟು ಮೀರಿದವರು, ಕಂಪನಿಗಳಲ್ಲಿ ಡೈರೆಕ್ಟರ್ ಆಗಿರುವವರು ಸೇರಿ ಸಾವಿರಾರು ಶ್ರೀಮಂತರು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ಅಂಥವರನ್ನು ಪತ್ತೆ ಹಚ್ಚಲಾಗುತ್ತಿದೆ. ನೈಜ ಫಲಾನುಭವಿಗಳಿಗೆ ಯೋಜನೆ ಸದ್ಬಳಕೆವಾಗಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಆಹಾರ ಇಲಾಖೆ ಹೇಳಿದೆ.

ನ್ಯಾಯಬೆಲೆ ಅಂಗಡಿಗಳಿಗೆ ಪಟ್ಟಿ ರವಾನೆ

ಶಂಕಾಸ್ಪದ ಕಾರ್ಡ್‌ಗಳಿಗೆ ಪಡಿತರ ವಿತರಿಸದಂತೆ ನ್ಯಾಯಬೆಲೆ ಅಂಗಡಿಗಳಿಗೆ ಇಲಾಖೆ ಸೂಚನೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ತಿಂಗಳಿಂದ ಶಂಕಾಸ್ಪದ ಕಾರ್ಡ್‌ಗಳ ಲಾನುಭವಿಗಳಿಗೆ ಅಕ್ಕಿ ಸಿಗಲ್ಲ. ವಾರ್ಷಿಕ 1.20 ಲಕ್ಷ ರೂ.ಗಿಂತ ಅಧಿಕ ಆದಾಯ ಸೇರಿ ವಿವಿಧ ಮಾನದಂಡಗಳನ್ನು ಉಲ್ಲಂಘಿಸಿ ಪಡೆದಿರುವ ಲಕ್ಷಾಂತರ ಬಿಪಿಎಲ್ ಕಾರ್ಡ್ ಪತ್ತೆಹಚ್ಚಿದ ಇಲಾಖೆ, ‘ಶಂಕಾಸ್ಪದ ವರ್ಗ’ಕ್ಕೆ ಸೇರಿಸಿದ್ದ ಪಡಿತರ ಚೀಟಿ ಪಟ್ಟಿಯನ್ನು ಅಂಗಡಿಗಳಿಗೆ ರವಾನಿಸಿದೆ. ಈ ಪಟ್ಟಿಯನ್ನು ಮಾಲೀಕರು, ತಮ್ಮ ಅಂಗಡಿ ಮುಂಭಾಗ ಅಂಟಿಸಿದ್ದಾರೆ. ಪಟ್ಟಿಯಲ್ಲಿ ಹೆಸರು, ಯಾವ ಅಂಗಡಿಯಲ್ಲಿ ಪಡಿತರ ಪಡೆಯುತ್ತಿರುವುದು, ಕಾರ್ಡ್ ಸಂಖ್ಯೆ ಮತ್ತು ಯಾವ ಕಾರಣಕ್ಕೆ ಕಾರ್ಡ್ ರದ್ದುಪಡಿಸಲಾಗಿದೆ ಸೇರಿ ಇತರೆ ವಿವರಗಳಿವೆ.

ಕುಟುಂಬದ ಸದಸ್ಯರ ಪೈಕಿ ಯಾರಾದರೂ ಜಿಎಸ್‌ಟಿ ಅಥವಾ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಕಾರ್ಡ್ ರದ್ದುಪಡಿಸುವ ಬದಲು ಅವರ ಹೆಸರನ್ನು ಡಿಲೀಟ್ ಮಾಡಬೇಕು. ಒಬ್ಬರ ತಪ್ಪಿಂದ ಕಾರ್ಡ್ ರದ್ದುಪಡಿಸಿದರೆ ಕುಟುಂಬದ ಇತರೆ ಸದಸ್ಯರಿಗೆ ತೊಂದರೆಯಾಗಲಿದೆ. ಈ ಬಗ್ಗೆ ಇಲಾಖೆ ನಮಗೆ ಒಂದು ಅವಕಾಶ ನೀಡಬೇಕು. ಏಕಾಏಕಿ ಕಾರ್ಡ್ ರದ್ದುಪಡಿಸಬಾರದು.

| ಹೆಸರಲೆಚ್ಚಿಸದ ಕಾರ್ಡ್‌ದಾರ.