ಬೆಂಗಳೂರು: ಮನೆ ಬಾಗಿಲಿಗೆ ಊಟ ತಂದು ಕೊಡುವ ಜೊಮ್ಯಾಟೋ ಡೆಲಿವರಿ ಯುವಕನೊಬ್ಬನಿಗೆ ಹೋಟೆಲ್ನವರು ಮೂಳೆ ಮುರಿಯುವಂತೆ ಹೊಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ಮೂಲದ ಜಗದೀಶ್ (25) ಕೆಲ ಕಾಲದಿಂದ ಜೊಮ್ಯಾಟೊದೊಂದಿಗೆ ಕೆಲಸ ಮಾಡುತ್ತಿದ್ದ. ಪ್ರತಿದಿನ 1000-1700 ರೂಪಾಯಿವರೆಗೂ ದುಡಿಮೆ ಮಾಡುತ್ತಿದ್ದ ಆತ ಇತ್ತೀಚೆಗೆ ಬೈಕ್ ಒಂದನ್ನು ಖರೀದಿಸಿ ಅದರಲ್ಲೇ ಫುಡ್ ಡೆಲಿವರಿ ಮಾಡುತ್ತಿದ್ದ. ಭಾನುವಾರದಂದು ಎಂದಿನಂತೆ ಕೆಲಸಕ್ಕೆ ಬಂದ ಜಗದೀಶ್ಗೆ ಬೆಳ್ಳಂದೂರು ಗೇಟ್ ಬಳಿ ಇರುವ ಫ್ಲೈಯಿಂಗ್ ಕಪ್ ರೆಸ್ಟೋರೆಂಟ್ನಿಂದ ಟೀ ಪಾರ್ಸಲ್ನ್ನು ಕೊಂಡೋಗುವುದಕ್ಕೆ ಜೊಮ್ಯಾಟೊ ಆ್ಯಪ್ನಲ್ಲಿ ಆದೇಶ ಬಂದಿದೆ. ಅದರಂತೆ ಫ್ಲೈಯಿಂಗ್ ಕಪ್ ರೆಸ್ಟೋರೆಂಟ್ನತ್ತ ಹೊರಟ ಜಗದೀಶ್ ತಿಂಡಿ ತಿನ್ನುವುದಕ್ಕೆಂದು ಗಾಡಿ ನಿಲ್ಲಿಸಿದ್ದು, 20 ನಿಮಿಷ ತಡವಾಗಿ ರೆಸ್ಟೋರೆಂಟ್ಗೆ ಬಂದಿದ್ದಾನೆ.
20 ನಿಮಿಷ ತಡವಾದ್ದರಿಂದ ಸಿಟ್ಟಿಗೆದ್ದ ಹೋಟೆಲ್ ಸಿಬ್ಬಂದಿ ಮೊದಲು ಜಗದೀಶ್ಗೆ ಬೈದಿದ್ದಾರೆ. ಮಾಡಿರುವ ಟೀ ತಣ್ಣಗಾಗಿದೆ, ಇನ್ನು 20 ನಿಮಿಷ ನೀನು ಕಾಯಬೇಕು ಎಂದಿದ್ದಾರೆ. ಆದರೆ ಆತನ ಎದುರಿಗೇ ಫ್ಲಾಸ್ಕ್ ಇದ್ದಿದ್ದರಿಂದ ಅದನ್ನು ತೆಗೆದುಕೊಳ್ಳಲು ಆತ ಮುಂದಾಗಿದ್ದಾನೆ. ಆಗ ಆತನ ಮೇಲೆ ಹಲ್ಲೆ ಮಾಡಲಾಗಿದೆ. ಹೋಟೆಲ್ನ ಮೂರು ಸಿಬ್ಬಂದಿ ಜಗದೀಶ್ನ ಬೆನ್ನು ಮೂಳೆ ಮುರಿಯುವಂತೆ ಹೊಡೆದಿದ್ದಾರೆ.
ನೆಲಕ್ಕೆ ಬಿದ್ದ ಜಗದೀಶ್ ತನ್ನ ಸ್ನೇಹಿತರಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಬಂದ ಸ್ನೇಹಿತರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆನ್ನು ಮೂಳೆ ಮುರಿದಿದ್ದು, ಕೆಲ ತಿಂಗಳ ಕಾಲ ಬೆಡ್ ರೆಸ್ಟ್ನಲ್ಲಿರಬೇಕು ಮತ್ತು ಬೈಕ್ ಓಡಿಸುವಂತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)