ಬೆಳಗಾವಿ: ನೇಸರಗಿ ಬಳಿಯ ಮತ್ತಿಕೊಪ್ಪದಲ್ಲಿನ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ವಿಶ್ವ ಆಹಾರ ದಿನಾಚರಣೆ ಏರ್ಪಡಿಸಲಾಗಿತ್ತು.
ಕೇಂದ್ರದ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರಲ್ಲಿ ಅಪೌಷ್ಟಿಕತೆ ಬಹಳ ಪ್ರಮಾಣದಲ್ಲಿದೆ. ಈ ಕೊರತೆ ನೀಗಿಸಲು ಔಷಧಗಳನ್ನು ತೆಗೆದುಕೊಳ್ಳದೆ ನಿತ್ಯದ ಆಹಾರದಲ್ಲಿ ಸಿರಿಧಾನ್ಯ, ತರಕಾರಿ, ಹಣ್ಣು ಬಳಸಬೇಕು. ಇವುಗಳಲ್ಲಿ ನಾರಿನಾಂಶ ಹೆಚ್ಚಿದ್ದು, ಆಹಾರವು ನಿಧಾನವಾಗಿ ಜೀರ್ಣವಾಗುತ್ತದೆ. ದೇಹಕ್ಕೆ ಬಹಳ ಸಮಯದವರೆಗೆ ಶಕ್ತಿ ಪೂರೈಸುತ್ತವೆ ಎಂದು ಹೇಳಿದರು.
ಕೇಂದ್ರದ ಗೃಹ ವಿಜ್ಞಾನಿ ಡಾ.ಭಾವಿನಿ ಪಾಟೀಲ ಮಾತನಾಡಿ, ಬದಲಾಗುತ್ತಿರುವ ಜೀವನಶೈಲಿ, ಅತಿಯಾದ ಎಣ್ಣೆ ಪದಾರ್ಥಗಳ ಸೇವನೆ ಹಾಗೂ ಉಪ್ಪು ಸಕ್ಕರೆಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸುವುದರಿಂದ ಚಿಕ್ಕ ವಯಸ್ಸಿನಲ್ಲಿಯೇ ರಕ್ತದೊತ್ತಡ, ಮಧುಮೇಹ, ಹೃದಯ ರೋಗ, ಕ್ಯಾನ್ಸರ್ ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಈ ಎಲ್ಲ ರೋಗಗಳನ್ನು ಹತೋಟಿಯಲ್ಲಿಡಲು ಸಿರಿಧಾನ್ಯಗಳು ವರದಾನ ಎಂದರು.
ಕೇಂದ್ರದ ವಿಜ್ಞಾನಿ ಎಸ್.ಎಂ.ವಾರದ, ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ.ಎಸ್.ಎಸ್.ಹಿರೇಮಠ, ಡಾ.ಪೃಥ್ವಿ ಹೆಗಡೆ, ಡಾ.ಮಧುರೀಮಾ, ಜಿ.ಬಿ.ವಿಶ್ವನಾಥ, ಡಾ.ಗುರುರಾಜ ಕೌಜಲಗಿ, ವಿನೋದ ಕೋಚಿ, ಮಂಜುನಾಥ ಪಿ.ಐ. ಹಾಗೂ 40 ಜನ ಕೃಷಿ ಸಖಿಯರು ಪಾಲ್ಗೊಂಡಿದ್ದರು.