ಮೈಸೂರು: ಸಾಧಕರು ಹಾಗೂ ಮಹನೀಯರು ಮಾಡಿರುವ ಸಾಧನೆಗಳ ಸಾರವನ್ನು ಜೀವನದಲ್ಲಿ ಅನುಸರಿಸಿದರೆ ಉತ್ತಮ ಮಾರ್ಗದಲ್ಲಿ ಸಾಗಬಹುದು ಎಂದು ಡಾ.ಎಸ್.ಪಿ.ಉಮಾದೇವಿ ಅಭಿಪ್ರಾಯಪಟ್ಟರು.
ನಗರದ ಜೆ.ಪಿ.ನಗರದಲ್ಲಿರುವ ಡಾ.ಪುಟ್ಟರಾಜ ಗವಾಯಿ ಯೋಗ ಮಂದಿರದಲ್ಲಿ ನಾದ ಹಂಸಿನಿ ಭಜನಾ ಸಂಘದಿಂದ ಇತ್ತೀಚೆಗೆ ಆಯೋಜಿಸಿದ್ದ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 110ನೇ ಜಯಂತಿ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಾನ್ ಸಾಧಕರು ಬದುಕಿನಲ್ಲಿ ಸಾಧನೆ ಮಾಡುವ ಸಂದರ್ಭದಲ್ಲಿ ಅರ್ಪಣಾ ಮನೋಭಾವನೆ, ತ್ಯಾಗ, ನಿಷ್ಠೆಯಿಂದ ಕಾರ್ಯ ಕೈಗೊಂಡಿರುತ್ತಾರೆ. ಆದ್ದರಿಂದ ಈ ಸಾಧನೆಗಳು ಅನುಭವದ ಪಾಠವಾಗಿವೆ. ಹೀಗಾಗಿ ಇಂದಿನ ಪಿಳೀಗೆಯು ಇವುಗಳನ್ನು ಅಳವಡಿಸಿಕೊಳ್ಳುವುದು ಅವಶ್ಯ ಎಂದರು.
ರಾಜೇಂದ್ರ ಶ್ರೀಗಳು ಕಾರುಣ್ಯ ಮೂರ್ತಿಗಳು. ಶಾಂತಿ, ಸಹನೆ, ಮಾತೃ ಹೃದಯ ಉಳ್ಳವರಾಗಿದ್ದ ಶ್ರೀಗಳು ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ತನು-ಮನ-ಧನವನ್ನೆ ಮುಡಿಪಾಗಿಟ್ಟಿದ್ದರು. ಓದುವ ಮಕ್ಕಳ ಶ್ರೆಯೋಭಿಲಾಷೆಗಾಗಿ ಹಗಲಿರುಳು ಶ್ರಮಿಸಿದರು ಎಂದು ಹೇಳಿದರು.
ಅಖಿಲ ಭಾರತ ವಿರಶೈವ-ಲಿಂಗಾಯತ ಮಹಾಸಭಾದ ಮಹಿಳಾ ನಗರ ಘಟಕದ ಅಧ್ಯಕ್ಷೆ ಧನ್ಯಾ ಸತ್ಯೆಂದ್ರಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕದ ಉಪಾಧ್ಯಕ್ಷ ಎಂ.ಚಿನ್ನಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಾದಹಂಸಿನಿ ಭಜನಾ ಸಂಘದ ಗೌರವಾಧ್ಯಕ್ಷೆ ಉಮಾ ಮಹದೇವಸ್ವಾಮಿ ಶ್ರೀಗಳಿಗೆ ನುಡಿ-ನಮನ ಸಲ್ಲಿಸಿದರು. ಅಧ್ಯಕ್ಷೆ ಮಂಜುಳಾ ಶಿವಕುಮಾರಸ್ವಾಮಿ, ಸಂಘದ ಪದಾಧಿಕಾರಿಗಳು ಇದ್ದರು.